ಶಿವಮೊಗ್ಗ: ಸಾಮಾನ್ಯವಾಗಿ ಕಾರು ಚಲಾಯಿಸುವ ಯುವಕರು ಬಸ್ಗಳನ್ನು ಚೇಸ್ ಮಾಡುವುದು, ಬಸ್ ಡ್ರೈವರ್ಗಳನ್ನು ರೇಗಿಸುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ. ಆದ್ರೆ, ತಮ್ಮ ಕಾರಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಬಸ್ ನಿರ್ವಾಹಕನಿಗೆ ಮನಸೋಯಿಚ್ಛೆ ಥಳಿಸಿರುವ ಘಟನೆ ಜೂನ್ 30 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾರಿಗೆ ಬಸ್ನವರು ಸೈಡ್ ಬಿಡದಿರುವುದಕ್ಕೆ ಕೋಪಗೊಂಡ ಕಿಡಿಗೇಡಿಗಳು 80 ಕಿ.ಮೀ ದೂರ ಚೇಸ್ ಮಾಡಿಕೊಂಡು ಬಂದು ಬಸ್ ಕಂಡಕ್ಟರ್ಗೆ ಮನಸೋಯಿಚ್ಛೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಉಡುಪಿಯಿಂದ ಶಿವಮೊಗ್ಗಕ್ಕೆ ಸಂಚರಿಸುವ ನಿಶಾನ್ ಖಾಸಗಿ ಬಸ್ ನಿರ್ವಾಹಕನಿಗೆ ಉಡುಪಿಯ ಕೆಲ ಕಿಡಿಗೇಡಿಗಳು ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದು ಬಸ್ಸೊಳಗೆ ನುಗ್ಗಿ ಥಳಿಸಿದ್ದಾರೆ.
ಉಡುಪಿ ಜಿಲ್ಲೆಯ ಸೀತಾ ನದಿ ಬಳಿ ನಿಶಾನ್ ಬಸ್ನವರು ಸ್ಥಳೀಯರ ಕಾರಿಗೆ ದಾರಿ ಬಿಡಲಿಲ್ಲ ಎಂದು ಕೋಪಗೊಂಡು, ಕಾರಿನಲ್ಲಿದ್ದ ಯುವಕರು ಸೀತಾ ನದಿಯಿಂದ ಶಿವಮೊಗ್ಗದ ಮಂಡಗದ್ದೆ ತನಕ ಬಂದು ಬಸ್ ನಿಲ್ಲಿಸಿದ್ದರು. ಆಗ ಕಂಡಕ್ಟರ್ ಗಣೇಶ್ ಅವರೊಂದಿಗೆ ಜಗಳವಾಡಿ, ಚೆನ್ನಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಬಸ್ನಿಂದ ಕೆಳಗಿಳಿಸಿ ಹೊಡೆದಿದ್ದಾರೆ. ನಿರ್ವಾಹಕ ಬಸ್ ಹತ್ತಿದರೂ ಬಿಡದೆ ಬಟ್ಟೆ ಹರಿದು ಹಾಕಿದ್ದಾರೆ. ಬಸ್ ಡ್ರೈವರ್ ಹಾಗೂ ಪ್ರಯಾಣಿಕರು ಬಿಡಿಸಲು ಯತ್ನಿಸಿದರೂ ಉಡುಪಿ ಜಿಲ್ಲೆಯ ಹರೀಶ್ ಹಾಗೂ ಆತನ ಸ್ನೇಹಿತರು ಚೆನ್ನಾಗಿ ಥಳಿಸಿ, ಪೊಲೀಸರಿಗೆ ದೂರು ನೀಡದಂತೆ ಧಮ್ಕಿ ಸಹ ಹಾಕಿದ್ದಾರೆ ಎನ್ನಲಾಗ್ತಿದೆ.
ಅಂದು ಕಂಡಕ್ಟರ್ ಗಣೇಶ್ ಅವರು ಹರೀಶ್ ಹಾಗೂ ಅವನ ಸ್ನೇಹಿತರ ಬೆದರಿಕೆಯಿಂದಾಗಿ ದೂರು ನೀಡದೆ ಮನೆಗೆ ಹೋಗಿದ್ದರು. ಕಂಡಕ್ಟರ್ಗೆ ಥಳಿಸಿರುವ ದೃಶ್ಯ ಬಸ್ನ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಯಾವುದೇ ದೂರು ಈವರೆಗೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.