ಶಿವಮೊಗ್ಗ : ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ, ನಗರದಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ಆಯೋಜಿಸಿರುವ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ರಾಷ್ಟ್ರೀಯತೆಯನ್ನು ಜನರಲ್ಲಿ ತುಂಬಬೇಕು ಎಂಬ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ.
ನಗರದ ಕರ್ನಾಟಕ ಸಂಘದಲ್ಲಿ ಆರ್ಎಸ್ಎಸ್ ಹಾಗೂ ರಾಷ್ಟ್ರೋತ್ಥಾನ ಬಳಗದಿಂದ ಪುಸ್ತಕ ಮೇಳ ಆಯೋಜನೆ ಮಾಡಲಾಗಿದೆ. ಜನರಲ್ಲಿ ದೇಶಭಕ್ತಿ ಮೂಡಿಸಬೇಕು ಹಾಗೂ ರಾಷ್ಟ್ರೀಯತೆ ತುಂಬಬೇಕು ಎಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಪುಸ್ತಕ ಮೇಳ ಯಶಸ್ವಿಯಾದ ಹಿನ್ನೆಲೆ ಶಿವಮೊಗ್ಗದಲ್ಲೂ ಪುಸ್ತಕ ಮೇಳ ಆಯೋಜಿಸಲಾಗಿದೆ. ರಾಷ್ಟ್ರೀಯತೆ ಬಿಂಬಿಸುವ ಪುಸ್ತಕಗಳೇ ಇಲ್ಲಿದ್ದು, ಇವುಗಳನ್ನು ಖರೀದಿಸುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.
ಮಕ್ಕಳಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯನ್ನು ತುಂಬಿದಲ್ಲಿ ಮಕ್ಕಳು ದೊಡ್ಡವರಾದಾಗ ಸಂಸ್ಕಾರಯುತರಾಗಿ ಬದುಕುತ್ತಾರೆ ಎಂಬ ಕಾರಣದಿಂದಾಗಿ ಮಕ್ಕಳಿಗಾಗಿಯೇ ನೀತಿಕಥೆಗಳು, ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಇಡಲಾಗಿದೆ.
ಜೊತೆಗೆ ಎಲ್ಲ ವಯೋಮಾನದವರಿಗಾಗಿಯೂ ಪುಸ್ತಕಗಳು ಲಭ್ಯವಿವೆ. ಪುಸ್ತಕ ಖರೀದಿ ಮಾಡದಿದ್ದರೂ ಪರವಾಗಿಲ್ಲ. ಜನ ಬಂದು ದೇಶಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನೋಡಲಿ. ಒಮ್ಮೆ ಪುಸ್ತಕ ನೋಡಿದರೆ ಸಾಕು ಮುಂದೆ ಒಂದಲ್ಲಾ ಒಂದು ದಿನ ಆ ಪುಸ್ತಕ ಓದುತ್ತಾರೆ ಎಂಬುದು ಪುಸ್ತಕ ಮೇಳ ಆಯೋಜಕರ ಉದ್ದೇಶವಾಗಿದೆ.
ಜನರಲ್ಲಿ ದೇಶಭಕ್ತಿ ಮೂಡಿದಾಗ ಮಾತ್ರ ದೇಶದ ಉನ್ನತಿ ಸಾಧ್ಯ. ಹೀಗಾಗಿ, ಜನರಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಪುಸ್ತಕ ಮೇಳ ಆಯೋಜನೆ ಮಾಡಿರುವುದಕ್ಕೆ ಪುಸ್ತಕ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.