ಶಿವಮೊಗ್ಗ: ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಎನ್ ರಾಜು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದ ದೇವಕಾತಿಕೊಪ್ಪ ಗ್ರಾಮದ ಸರ್ವೆ ನಂ 45 ರಲ್ಲಿ ಹಾಗೂ 64 ಸರ್ವೆ ನಂ. ನಲ್ಲಿ ಅಕ್ರಮವಾಗಿ ಅನೇಕ ವರ್ಷಗಳಿಂದ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ನಿತ್ಯ ನೂರಾರು ಲಾರಿಗಳು ನಿರ್ಭಿತಿಯಿಂದ ಕಲ್ಲು ಸಾಗಿಸುತ್ತಿದ್ದರೂ ತಾಲೂಕು ಆಡಳಿತ, ಜಿಲ್ಲಾಡಳಿತ, ಹಾಗೂ ಗ್ರಾಮಾಂತರ ಪೋಲಿಸರು ಮೌನವಹಿಸಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಹಾಗಾಗಿ ಸರ್ಕಾರಕ್ಕೆ ಮೋಸ ಮಾಡಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು, ಸಂಸದರು, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಕೃಪಾ ಕಟಾಕ್ಷ ಏನಾದರೂ ಇದೆಯಾ? ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ, ಕೂಡಲೇ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರ್ಕಾರಕ್ಕೆ ಮೋಸ ಮಾಡಿ ಕೋಟ್ಯಂತರ ರೂ ನಷ್ಟ ಮಾಡಿರುವುದನ್ನು ವಸೂಲಿ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.