ಶಿವಮೊಗ್ಗ: ಶಿಕಾರಿಪುರದ ನೂತನ ಶಾಸಕ ಬಿ ವೈ ವಿಜಯೇಂದ್ರ ಅವರು ಚುನಾವಣೆಯಲ್ಲಿ ಗೆಲ್ಲದಂತೆ ವಾಮಚಾರ ನಡೆಸಲಾಗಿತ್ತು ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ. ಶಿಕಾರಿಪುರದ ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕು ಬಂಡಿ ಭೈರಪುರಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದ ಸರ್ವೆ ನಂಬರ್ 35 ರಲ್ಲಿ ಯಡಿಯೂರಪ್ಪ ಒಡೆತನದ ಅಡಕೆ ತೋಟವಿದೆ. ಈ ತೋಟದಲ್ಲಿ ಪುನುಗು ಬೆಕ್ಕನ್ನು ಮಣ್ಣಿನಲ್ಲಿ ಹೂತಿಟ್ಟು ಅದಕ್ಕೆ ಪೂಜೆ ನಡೆಸಿ, ವಾಮಚಾರ ನಡೆಸಲಾಗಿತ್ತು. ಈ ಕುರಿತು ತೋಟ ನೋಡಿಕೊಳ್ಳುವ ರಮೇಶ್ ಎಂಬುವವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಿಕಾರಿಪುರದ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆದ ಮರುದಿನ ಅಂದರೆ ಮೇ 11 ರಂದು ಈ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಾಮಚಾರ ನಡೆದ ಬಗ್ಗೆ ಮಾಹಿತಿ ಸಿಕ್ಕ ನಂತರ ರಮೇಶ್ ಅವರು ಮೇ 12 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತೋಟದಲ್ಲಿ ಪ್ರಾಣಿಯನ್ನು ಕೊಂದು ಹೂತು ಹಾಕಿ ವಾಮಚಾರ: ವಾಮಚಾರದ ಬಗ್ಗೆ ಶಿಕಾರಿಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ ಅವರು, ನಮ್ಮ ಹೊನ್ನಾಳಿ ರಸ್ತೆಯ ತಮ್ಮ ತೋಟದಲ್ಲಿ ಪ್ರಾಣಿಯನ್ನು ಕೊಂದು ಹೂತು ಹಾಕಿ ವಾಮಚಾರ ನಡೆಸಲಾಗಿದೆ. ರಾತ್ರಿ 10 ಗಂಟೆಗೆ ನನಗೆ ಒಂದು ಪೋನ್ ಬಂತು. ಆಗ ಒಬ್ಬರು ಮಾತನಾಡಿ, ನಿಮ್ಮ ತೋಟದ ಮನೆಯಲ್ಲಿನ ಕಾಂಪೌಂಡ್ನಲ್ಲಿ ಹೂವನ್ನು ಕೀಳುತ್ತಿದ್ದಾರೆ ಎಂದು ಪೋನ್ ಮಾಡಿದ್ದರು.
ತಕ್ಷಣ ತೋಟ ನೋಡಿಕೊಳ್ಳುವ ವ್ಯಕ್ತಿಗಳಿಗೆ ಪೋನ್ ಮಾಡಿ ಜನರನ್ನು ಕಳುಹಿಸಿ ಕೊಟ್ಟೆ. ನಂತರ ಅಲ್ಲಿ ಹೋಗಿ ಹೂವುಗಳನ್ನು ತೆಗೆದು ನೋಡಿದಾಗ ಪುನುಗು ಬೆಕ್ಕು ಸಿಕ್ಕಿತು. ಈ ಪುನುಗು ಬೆಕ್ಕು ಆಂಧ್ರಪ್ರದೇಶ ಹಾಗೂ ಕೊಳ್ಳೇಗಾಲದಲ್ಲಿ ಸಿಗುತ್ತದೆ. ಇದನ್ನು ವಿರೋಧಿಗಳು ನಮ್ಮಲ್ಲಿ ಇರುವ ಎಲ್ಲಾ ಶಕ್ತಿಗಳನ್ನು ಆಕರ್ಷಣೆ ಮಾಡಲು. ನಮ್ಮ ಅಭ್ಯರ್ಥಿ, ನಮ್ಮ ನಾಯಕರುಗಳಿಗೆ ಹಾಗೂ ನಮ್ಮ ಪಕ್ಷಕ್ಕೆ ತೂಂದರೆ ಅಗುವಂತೆ ಮಾಡುವ ವಾಮಚಾರವಾಗಿದೆ.
ಹೊನ್ನಾಳಿ ಕಡೆಯಿಂದ ಬಂದು ವಾಮಾಚಾರ ನಡೆಸಲಾಗಿದೆ: ಮತ ಎಣಿಕೆ ಒಂದು ದಿನ ಮೊದಲು ಇದು ಗೊತ್ತಾಯಿತು. ಮೇ 11 ರಂದು ರಾತ್ರಿ 10 ರಿಂದ 10:30 ಒಳಗೆ ಈ ಘಟನೆ ನಡೆದಿದೆ. ಹೊನ್ನಾಳಿ ಕಡೆಯಿಂದ ಬಂದು ವಾಮಾಚಾರ ನಡೆಸಲಾಗಿದೆ. ಇದನ್ನು ಇತರ ಕಡೆ ವಿಚಾರಿಸಿದಾಗ ಈ ಪ್ರಾಣಿ ಹಿಡಿಯಲು 8-10 ದಿನ ಬೇಕು. ನಂತರ 8-10 ದಿನ ಜೀವಂತ ಪೂಜೆ ಮಾಡಿ, ನಂತರ ಜೀವ ತೆಗೆದು ನಮ್ಮ ಮನೆ ಹತ್ತಿರ ಹೂತು ಹಾಕಿದ್ದಾರೆ. ಇದರ ಪ್ರಭಾವ ನಮಗೆ ಆಗಿತ್ತು. ನಾವು ಪೂಜೆಗೆಂದು ಪೂಜಾರಿಯನ್ನು ಕರೆ ತರುವಾಗ ಒಂದು ದುರ್ಘಟನೆ ನಡೆಯಿತು. ಇದನ್ನು ಮಾಡಿಸಿದವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದರು.
ಕಾನೂನು ಪ್ರಕಾರ ಹೂತು ಹಾಕಿದ್ದ ಪುನುಗು ಬೆಕ್ಕನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ಅಂದೇ ದೂರು ಸಹ ನೀಡಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ ಹಾಗೂ ರಾಜ್ಯ ಯುವ ನಾಯಕ ವಿಜಯೇಂದ್ರ ಅವರ ಏಳಿಗೆ ಸಹಿಸದ ನಮ್ಮ ಸ್ನೇಹಿತರು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವಾಮಾಚಾರ ಶಂಕೆ : ಗ್ರಾಮಸ್ಥರಲ್ಲಿ ಆತಂಕ