ಶಿವಮೊಗ್ಗ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯದ ನಾಯಕರ ಜೊತೆ ಚೆರ್ಚೆ ಮಾಡಿ, ಕೇಂದ್ರ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ದೆಹಲಿ ಮಟ್ಟದಲ್ಲಿ ಏನು ಚೆರ್ಚೆಯಾಗಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಮೈತ್ರಿಯಿಂದ ಬಿಜೆಪಿಗೆ ಏನು ಲಾಭ ಆಗುತ್ತದೆ ಎಂಬುದರ ಬಗ್ಗೆ ತುಲನೆ ಮಾಡಿ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳು ಕಳೆದಿದೆ. ಈಗಾಗಲೇ ಅವರ ಶಾಸಕರ ಮಧ್ಯೆ ಅಸಮಾಧಾನ ಪ್ರಾರಂಭವಾಗಿದೆ. ನಿನ್ನೆ ಅವರದ್ದೇ ಪಕ್ಷದ ನಾಯಕರು ಆಡಿರುವ ಮಾತು ಮತ್ತು ಪದ ಪ್ರಯೋಗವನ್ನು ರಾಜ್ಯದ ಜನ ಗಮನಿಸಿದ್ದಾರೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರಲ್ಲೇ ಅಸಮಾಧಾನ ಭುಗಿಲೇಳುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ನಮಗೆ ಭಯ ಇಲ್ಲ. ಅವರು ಚುನಾವಣಾ ಪೂರ್ವದಲ್ಲಿ ಏನು ಭರವಸೆ ನೀಡಿದ್ದರು. ಈಗ ಹೇಗೆ ನಡೆದುಕೊಳ್ಳುತ್ತಿದ್ದಾರೆ, ಒಂದೇ ಮಾತಲ್ಲಿ ಹೇಳಬೇಕೆಂದರೆ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಒಂದು ಕಡೆ ರೈತರ ವಿಚಾರದಲ್ಲಿ ಸರ್ಕಾರ ಮತ್ತು ಸರ್ಕಾರದಲ್ಲಿರುವ ಮಂತ್ರಿಗಳ ಹೇಳಿಕೆಯನ್ನು ಗಮನಿಸಿದರೆ ರಾಜ್ಯದ ರೈತರ ಬಗ್ಗೆ ಬದ್ಧತೆ, ಕಳಕಳಿ ಇಟ್ಟುಕೊಳ್ಳದ ಸರ್ಕಾರ ಇದು ಎಂದು ತಿಳಿಯುತ್ತದೆ. ಮಂತ್ರಿಗಳಿಗೆ ಹೊಸ ಕಾರು ಖರೀದಿ ಮಾಡುವುದು ಇವರ ಆದ್ಯತೆ ಆಗಿದೆ. ಮತ್ತೊಂದು ಕಡೆಯಲ್ಲಿ ರಾಜ್ಯದಲ್ಲಿ ರೈತರು ಬೀದಿಗಿಳಿಯುತ್ತಿದ್ದಾರೆ. ಬರಗಾಲ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ ಅಂತ ಸ್ವತಃ ಕಂದಾಯ ಸಚಿವರು ಹೇಳಿದ್ದಾರೆ, ಆದರೆ ಪ್ರತಿ ಘೋಷಣೆ ನಂತರ ಮುಂದೂಡುತ್ತಿದ್ದಾರೆ. ರೈತರ ಬಗ್ಗೆ ಕಳಕಳಿ ಇಲ್ಲದೆ ಇರುವ ಸರ್ಕಾರ ಇದು ಎಂದು ಹರಿಹಾಯ್ದರು.
ಪರಿಹಾರ ಹೆಚ್ಚು ಕೊಟ್ಟಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಾಗ ನನಗೆ ಸಚಿವರು ಟೀಕೆಯನ್ನು ಸಹ ಮಾಡಿದ್ದರು. ಇಲ್ಲಿ ಮೊದಲ, ಎರಡನೇ ಬಾರಿ ಶಾಸಕ ಎಂಬ ಪ್ರಶ್ನೆ ಅಲ್ಲ. ರಾಜ್ಯದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುಕೊಳ್ಳಬೇಕಿತ್ತು. ಆದರೆ ಹಾಗೆ ನಡೆದುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರ ಗ್ಯಾರಂಟಿಗಳ ಜಾತ್ರೆಯಲ್ಲಿ ಮುಳುಗಿ ಹೋಗಿದ್ದಾರೆ. ಮತ್ತೊಂದು ಕಡೆ ರಾಜ್ಯದ ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಳ್ಳದಂತಹ ಪರಿಸ್ಥಿತಿಗೆ ಸರ್ಕಾರ ಬಂದಿದೆ. ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕೊಡುತ್ತಾರೆ ಎಂದರು. ಇನ್ನು ಯಡಿಯೂರಪ್ಪ ಮತ್ತೆ ಮುನ್ನಲೆಗೆ ಬಂದಿರುವ ವಿಚಾರವಾಗಿ ಮಾತನಾಡಿ, ತಂದೆಯವರು ಮುನ್ನಲೆಗೆ ಬರುವುದು ವಿಶೇಷ ಅಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರು ಹಾಗೂ ಪಕ್ಷದ ಅನೇಕ ನಾಯಕರು ಪಕ್ಷ ಕಟ್ಟಿ ಈ ಮಟ್ಟಕ್ಕೆ ತಂದಿದ್ದಾರೆ. ಸಹಜವಾಗಿಯೇ ಚುನಾವಣೆ ಮುಗಿದ ಸಂದರ್ಭದಲ್ಲಿ ಮತ್ತೆ ಕಾರ್ಯಕರ್ತರನ್ನು ಸಜ್ಜುಗೊಳ್ಳಿಸಬೇಕು. ಮತ್ತೊಂದೆಡೆ, ರೈತರು ಸಂಕಷ್ಟದಲ್ಲಿದ್ದಾಗ ಅವರ ಸಂಕಷ್ಟಕ್ಕೆ ಸ್ಪಂದನೆ ಮಾಡಬೇಕು ಎನ್ನುವ ಕಾರಣಕ್ಕೆ ಯಡಿಯೂರಪ್ಪ ನವರ ಹಾಗೂ ಹಿರಿಯ ನಾಯಕರ ನೇತೃತ್ವದಲ್ಲಿ ಹೋರಾಟಕ್ಕೆ ಧುಮುಕಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 'ಲೋಕ'ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ: ಕಮಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ, ದಳ ವಿರೋಧಿಗಳಿಗೆ ಇರಿಸುಮುರಿಸು