ಶಿವಮೊಗ್ಗ: ಸೊರಬ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಕೊಡುಗೆ ಸಾಕಷ್ಟಿದ್ದು, ಪಕ್ಷಾತೀತವಾಗಿ ಅವರ ಕೆಲಸವನ್ನು ಎಲ್ಲರೂ ಒಪ್ಪಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಪ್ರಭಾಕರ ರಾಯ್ಕರ್ ಹೇಳಿದರು.
ಸೊರಬ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೇ ಆಗಲಿ ಬಂಗಾರಪ್ಪ ಅವರ ಕಾರ್ಯವೈಖರಿಯನ್ನು ವ್ಯಕ್ತಿಗತವಾಗಿ ವಿರೋಧಿಸುವುದು ಶೋಭೆ ತರುವುದಿಲ್ಲ. ನಮ್ಮ ಪಕ್ಷದ ಮುಖಂಡ ಮಲ್ಲಿಕಾರ್ಜುನ ದ್ವಾರಹಳ್ಳಿ ಅವರು ಬಂಗಾರಪ್ಪ ಅವರಿಂದ ತಾಲೂಕಿನಲ್ಲಿ ಯಾವುದೇ ಅನುಕೂಲವಾಗಿಲ್ಲ ಎಂದು ಆರೋಪಿಸಿ, ಅವರ ಹೆಸರು ಬಳಸಿ ಕುಟುಂಬಕ್ಕೆ ಅವಮಾನ ಮಾಡಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಪಕ್ಷದ ಹಿರಿಯರ ಗಮನಕ್ಕೆ ತರಲಾಗುವುದು ಎಂದರು.
ಬಳಿಕ ಪಟ್ಟಣ ಪಂಚಾಯತ್ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ಜನತೆಗೆ ಒಳಿತಾಗುವ ವಿಷಯದಲ್ಲಿ ರಾಜಕೀಯ ಸಲ್ಲದು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ನಾಡು ಕಂಡ ವರ್ಣರಂಜಿತ ರಾಜಕಾರಣಿ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ತಾಲೂಕಿನ ನೀರಾವರಿ ಯೋಜನೆಗಳಿಗೆ ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಅಪಾರ ಕೊಡುಗೆ ನೀಡಿದ್ದಾರೆ ಎಂದರು.