ಶಿವಮೊಗ್ಗ: ಹಿಂದೂ ಸಮಾಜವನ್ನು ರಕ್ಷಣೆ ಮಾಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಈ ಸಂಬಂಧ ಅಗತ್ಯ ಇರುವ ಕಾನೂನುನ್ನು ಜಾರಿಗೆ ತರುತ್ತೇವೆ. ಯಾವುದೇ ಕಾರಣಕ್ಕೂ ಮತಾಂತರ ಆಗಲು ಬಿಡೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಧರ್ಮ,ಸಂಸ್ಕೃತಿ ಉಳಿಸುವ ಕಲ್ಪನೆನೂ ಸಹ ಕಾಂಗ್ರೆಸ್ಗೆ ಇಲ್ಲ. ಇದರಿಂದ ಕಾಂಗ್ರೆಸ್ ದಿನೇ ದಿನೆ ಕ್ಷೀಣಿಸುತ್ತಿದ್ದು, ಪ್ರಾದೇಶಿಕ ಪಕ್ಷವಾಗಿಯೂ ಉಳಿದಿಲ್ಲ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರನ್ನು ತೃಪ್ತಿ ಪಡಿಸಿದರೆ ಕಾಂಗ್ರೆಸ್ ಉಳಿಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ.
ಇದಕ್ಕಾಗಿಯೇ ಮತಾಂತರ ಮಸೂದೆ ಮಂಡನೆಗೂ ಮುನ್ನವೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವು ಯಾರ ಬಗ್ಗೆಯು ದೋಷಣೆ ಮಾಡಲ್ಲ. ಹಿಂದೂಗಳ ಬಡತನವನ್ನೇ ದುರುಪಯೋಗ ಪಡೆದುಕೊಂಡು ಆಸೆ, ಆಮಿಷ ತೋರಿಸಿ, ನಮ್ಮ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ ಮತಾಂತರ ಮಾಡುವುದಕ್ಕಾಗಿ ನಾವು ಬಿಡೋದಿಲ್ಲ ಎಂದರು.
ಮತಾಂತರ ನಿಷೇಧ ಹಾಗೂ ಗೋ ಹತ್ಯ ನಿಷೇಧ ಎರಡನ್ನು ಬಹಳ ಗಂಭೀರವಾಗಿ ಬಿಜೆಪಿ ತೆಗೆದುಕೊಂಡಿದೆ. ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಗೋ ಕಳ್ಳರು ಬೇಗನೆ ಜಾಮೀನು ಪಡೆದುಕೊಂಡು ಬರುತ್ತಿದ್ದಾರೆ. ಮತಾಂತರವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುತ್ತಿದೆ.
ನಮ್ಮಲ್ಲೂ ಮತಾಂತರ ನಡೆದಿದೆ. ಅವರನ್ನು ವಾಪಸ್ ಕರೆದುಕೊಂಡು ಬರುತ್ತೇವೆ ಎಂದು ವೀರಶೈವ ಮಠಾಧಿಪತಿಗಳು ಹೇಳಿದ್ದಾರೆ. ಈ ಕಾಯ್ದೆ ಈ ಸದನದಲ್ಲಿ ಆಗುತ್ತೋ, ಇಲ್ವೋ ನನಗೆ ಗೂತ್ತಿಲ್ಲ. ಅದನ್ನು ಗೃಹಮಂತ್ರಿಗಳು ಹಾಗೂ ಕಾನೂನು ಮಂತ್ರಿಗಳು ನೋಡಿಕೊಳ್ಳುತ್ತಾರೆ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲು ಆಗಲಿಲ್ಲ. ಆದರೆ, ಮತಾಂತರ ನಿಷೇಧ ಹಾಗೂ ಗೋ ಹತ್ಯೆಯ ನಿಷೇಧ ಬಗ್ಗೆ ಕಠಿಣ ಕಾನೂನು ಮಾಡುತ್ತೇವೆ ಎಂದರು.
ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ ಸಚಿವರು:
ಶಿವಮೊಗ್ಗ ಪರಿಷತ್ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮತ ಬರುವ ಸಾಧ್ಯತೆ ಇದೆ. ಪರಿಷತ್ನಲ್ಲಿ ಮಸೂದೆ ಅಂಗೀಕಾರವಾಗಬೇಕಾದರೆ ಬಹುಮತ ಮುಖ್ಯವಾಗುತ್ತದೆ. ಇದರ ಬಗ್ಗೆ ಮತದಾರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅನೇಕ ಕಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಮಗೆ ಬೆಂಬಲ ನೀಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಸ್ಥಾನದಲ್ಲಿ ಗೆಲುವು ಸಾಧಿಸುವ ಕುರಿತಂತೆ ವಿಶ್ವಾಸ ವ್ಯಕ್ತಪಡಿಸಿದರು.
ವಿಕೃತರು ದೇಶ ಬಿಟ್ಟು ಹೋಗಲಿ:
ಬಿಪಿಎನ್ ರಾವತ್ ಸಾವನ್ನು ಸಂಭ್ರಮಿಸುತ್ತಿರುವವರು ನಮ್ಮ ದೇಶದಲ್ಲಿಯೇ ಇರಲು ಆಯೋಗ್ಯರಲ್ಲ. ಅಂತಹವರು ದೇಶ ಬಿಟ್ಟು ತೊಲಗಬೇಕು. ಇಡೀ ವಿಶ್ವವೇ ದುಃಖದಲ್ಲಿದೆ. ನಾನು ಅದನ್ನು ಕೊಲೆ ಎಂದು ಕರೆಯಲ್ಲ. ಕಾರಣ ಇನ್ನೂ ತನಿಖೆಯಲ್ಲಿದೆ. ಸತ್ಯ ಹೊರ ಬಂದ ನಂತರ ಏನೆಂದು ತಿಳಿದು ಬರುತ್ತದೆ ಎಂದರು.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿ ಬೇಡ: ಸಿಎಂಗೆ ಕ್ರೈಸ್ತ ಸಮುದಾಯದ ಮನವಿ