ಶಿವಮೊಗ್ಗ: ರಾಜ್ಯ ಬಿಜೆಪಿಯದ್ದು 6 ತಿಂಗಳ ಸರ್ಕಾರ, ಇದು ಅವರ ಒಳ ಜಗಳದಿಂದ ಬಿದ್ದು ಹೋಗುತ್ತದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಭವಿಷ್ಯ ನುಡಿದಿದ್ದಾರೆ. ಮುಂದಿನ 6 ತಿಂಗಳಲ್ಲಿ ಪತನವಾಗುತ್ತದೆ. ಅಧಿಕಾರದ ವ್ಯಾಮೋಹದಿಂದ ಬಿದ್ದು ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಉರುಳಲಿದೆ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಉಪಮುಖ್ಯಮಂತ್ರಿ ಆಗುವುದು ಅವರ ಪಕ್ಷದವರಿಗೆ ಬಿಟ್ಟ ವಿಚಾರ. ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ 5 ಕೆ.ಜಿ ಅಕ್ಕಿ ನೀಡಿದ್ರು, ಅದನ್ನು ಬಿಜೆಪಿಯವರು 2 ಕೆ.ಜಿಗೆ ಇಳಿಸಿದ್ದಾರೆ. ಕೊರೊನಾ ಇಲ್ಲ ಅಂದಿದ್ದರೆ ಅವರು ಅಕ್ಕಿನೇ ಕೊಡ್ತಾ ಇರಲಿಲ್ಲ. ಕಾಂಗ್ರೆಸ್ ಪಕ್ಷ ಏನ್ ಮಾಡಿದೆ ಅಂತ ನಮಗೆ ಕೇಳ್ತಾರೆ, ಆದ್ರೆ ನಮ್ಮ ಪಕ್ಷ ಏನ್ ಮಾಡಿದೆ ಅನ್ನೋದಕ್ಕೆ ಅವರ ಮುಂದೆಯೇ ಸಾಕ್ಷಿ ಇದೆ ಎಂದರು.
ಪ್ರಧಾನಮಂತ್ರಿ ಓದಿದ ಶಾಲೆಯನ್ನು ನಿರ್ಮಿಸಿದ್ದು ಕಾಂಗ್ರೆಸ್, ಬಿಜೆಪಿ ಧರ್ಮದ ಮೇಲೆ ರಾಜಕೀಯ ಮಾಡುತ್ತಿದೆ. ಇದು ಜನರಿಗೆ ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ಸಂಗಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಜನರಿಗೆ ಕೊರೊನಾ ಲಸಿಕೆ ನೀಡಲು ಶಾಸಕರ ಅನುದಾನದಲ್ಲಿ 1 ಕೋಟಿ ರೂ.ಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವುದಾಗಿ ಸಂಗಮೇಶ್ ಹೇಳಿದರು.