ಶಿವಮೊಗ್ಗ: ಕೇವಲ ಎರಡು ಸೀಟು ಪಡೆದಿದ್ದ ಬಿಜೆಪಿ ಇಂದು ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಿರುವುದು ಕುತಂತ್ರದ ರಾಜಕಾರಣದಿಂದ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪಿಸಿವೆ.
ಚುನಾವಣೆ ನಂತರ ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಲತೇಶ್, ಜೆಡಿಎಸ್ ಮುಖಂಡ ಹೆಚ್.ಟಿ.ಬಳಿಗಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಹೆಚ್.ಟಿ.ಬಳಿಗಾರ್, ಬಿಜೆಪಿ ಹಣದ ಮೇಲೆ ಅಧಿಕಾರ ನಡೆಸುತ್ತಿದೆ. ಯಡಿಯೂರಪ್ಪನವರು ಇಂತಹ ಕೆಳ ಮಟ್ಟದ ರಾಜಕಾರಣ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎಸ್ಸಿ ಮಹಿಳಾ ಅಭ್ಯರ್ಥಿ ಇಲ್ಲದೆ ಹೋದರೂ ಸಹ ಪಕ್ಷೇತರರನ್ನು ಕರೆತಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಧಿಕಾರಗಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯು ಪಕ್ಷೇತರನ್ನು ಹಾಗೂ ಜೆಡಿಎಸ್ನ ಓರ್ವರನ್ನು ಸೇರಿಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. 17 ಸ್ಥಾನದಲ್ಲಿ ಕಾಂಗ್ರೆಸ್ 7, ಜೆಡಿಎಸ್ 3, ಬಿಜೆಪಿ 2 ಹಾಗೂ ಪಕ್ಷೇತರರು 5 ಜನ ಗೆದ್ದಿದ್ದರು.ಬಿಜೆಪಿಯು ತನ್ನ ಇಬ್ಬರು ಸದಸ್ಯರು, 5 ಜನ ಪಕ್ಷೇತರರನ್ನು, ಜೆಡಿಎಸ್ ಓರ್ವರನ್ನು ಹಾಗೂ ಸಂಸದರ ಮತ ಸೇರಿ ಒಟ್ಟು 9 ಮತಗಳನ್ನು ಹೊಂದಿತ್ತು. ಇದರಿಂದ ಬಿಜೆಪಿ ಬಹುಮತ ಹೊಂದಿರುವ ಕಾರಣ ಕಾಂಗ್ರೆಸ್ ನವರು ನಾಮಪತ್ರ ಸಲ್ಲಿಸಿರಲಿಲ್ಲ ಎನ್ನಲಾಗಿದೆ.
ಆದರೆ, ಬಿಜೆಪಿಗೆ ಬೆಂಬಲ ನೀಡಿದ ಜೆಡಿಎಸ್ ಮಕ್ಬೂಲ್ ಸಾಬ್, ನಾನು ಪಟ್ಟಣದ ಅಭಿವೃದ್ದಿಗೆ ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಪಕ್ಷದಲ್ಲಿ ಹಿರಿಯನಾಗಿದ್ದ ನನ್ನನ್ನೇ ಹೊರಗಿಟ್ಟು ರಾಜಕೀಯ ಮಾಡಲು ಹೋಗಿದ್ದರು. ಅಲ್ಲದೇ, ಕಾಂಗ್ರೆಸ್ ನವರು ಪಕ್ಷೇತರರ ಜೊತೆ ಸೇರಿ ಅಧಿಕಾರ ಹಿಡಿಯಲು ಹೋಗಿದ್ದರು. ಇದರಿಂದ ನಾನು ನನ್ನ ವಾರ್ಡ್ ನ ಮತದಾರರ, ಪಕ್ಷದ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿ ಬೆಂಬಲ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.