ಶಿವಮೊಗ್ಗ: ಭದ್ರಾವತಿಯ ವಿಐಎಸ್ಪಿ ಕಾರ್ಖಾನೆಯನ್ನು ಮುಚ್ಚುವ ಕುರಿತು ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ ಕಳೆದ ಒಂದು ತಿಂಗಳಿಂದ ಗುತ್ತಿಗೆ ಕಾರ್ಮಿಕರು ತಮ್ಮ ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕೆಂದು ನಡೆಸುತ್ತಿರುವ ಹೋರಾಟ 30ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕಾರ್ಮಿಕರು ಕಾರ್ಖಾನೆಯ ಹೊರ ಭಾಗದ ಕಾಂಪೌಂಡ್ ಗೋಡೆಯನ್ನು ಅಪ್ಪಿಕೊಂದು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲು ಶಿವಮೊಗ್ಗಕ್ಕೆ ತೆರಳಿದರು.
ಭದ್ರಾವತಿಯಿಂದ ಶಿವಮೊಗ್ಗದ ಸೈನ್ಸ್ ಮೈದಾನದವರೆಗೆ ಬೈಕ್ ರ್ಯಾಲಿ ನಡೆಸಿದ ಕಾರ್ಮಿಕರು, ಮೈದಾನದಿಂದ ಪಾದಯಾತ್ರೆ ಆರಂಭಿಸಿ ಬಿ.ಹೆಚ್.ರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆಯ ಮೂಲಕ ಗೋಪಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ನಂತರ ಬಾಲರಾಜ್ ಅರಸ್ ರಸ್ತೆಯ ಮೂಲಕ ಮಹಾವೀರ ವೃತ್ತದಲ್ಲಿ ಪುನಃ ಮಾನವ ಸರಪಳಿ ನಿರ್ಮಾಣ ಮಾಡಿದರು. ಜಿಲ್ಲಾಧಿಕಾರಿಗಳು ಇಲ್ಲಿಯೇ ಬಂದು ತಮ್ಮ ಮನವಿ ಪತ್ರ ಸ್ವೀಕರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಮಹಾವೀರ ವೃತ್ತ ತಲುಪುವ ವೇಳೆಗೆ ಜಿಲ್ಲಾಧಿಕಾರಿ ಏರ್ಪೋರ್ಟ್ ಕಾಮಗಾರಿ ವೀಕ್ಷಣೆಗೆ ತೆರಳಿದ್ದರು. ಇದರಿಂದ ಮನವಿ ಸ್ವೀಕರಿಸಲು ಉಪ ವಿಭಾಗಧಿಕಾರಿಗಳು ಆಗಮಿಸಿದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ನಾವು ಜಿಲ್ಲಾಧಿಕಾರಿಗೆ ಮಾತ್ರ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ರಸ್ತೆ ತಡೆ: ಮಹಾವೀರ ವೃತ್ತದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಾನವ ಸರಪಳಿ ನಿರ್ಮಾಣ ಮಾಡಿ ರಸ್ತೆ ತಡೆ ನಡೆಸಿದರು. ಬಳಿಕ ಡಿಸಿ ಕಚೇರಿ ಮುಂದೆ ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ನಡೆಸಿದರು. ಡಿಸಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಸ್ಥಳಕ್ಕಾಗಮಿಸಿ ಕಾರ್ಮಿಕರ ಮನವಿ ಸ್ವೀಕರಿಸಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಕಾರ್ಖಾನೆಯನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ್ದಾರೆ. ಇಂತಹ ಕಾರ್ಖಾನೆಯನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಭದ್ರಾವತಿ ವಿಎಸ್ಎಲ್ ಕಾರ್ಖಾನೆ ಉಳಿಸಲು ಬಿಎಸ್ವೈ ಒತ್ತಾಯ: ಕಾರ್ಖಾನೆ ಸ್ಥಗಿತಗೊಳಿಸದಂತೆ ಕ್ರಮ ಎಂದ ಸಚಿವ ಜೆ.ಸಿ.ಮಾಧುಸ್ವಾಮಿ
ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಈಗಾಗಲೇ ಹತ್ತಕ್ಕೂ ಅಧಿಕ ವರ್ಷಗಳಿಂದ ನಾವು ಇಲ್ಲಿ ಸೇವೆ ಸಲ್ಲಿಸಿದ್ದೇವೆ. ನಮಗೆ ವಯಸ್ಸಾಗಿದೆ. ನಮಗೆ ಬೇರೆ ಉದ್ಯೋಗ ಸಿಗುವುದಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ ತಾಯಿ, ಮಕ್ಕಳು ಇದ್ದಾರೆ. ಅವರಿಗೆ ನಾವು ಏನು ಹೇಳಬೇಕು. ದಯವಿಟ್ಟು ಕಾರ್ಖಾನೆ ಉಳಿಸಿ ಎಂದು ಮನವಿ ಮಾಡಿಕೊಂಡರು. ಈಗಾಗಲೇ ಭಾರತೀಯ ಉಕ್ಕು ಪ್ರಾಧಿಕಾರ ಈ ಕಾರ್ಖಾನೆಯು ನಷ್ಟದಲ್ಲಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು ಸರ್ಕಾರ ಕಾರ್ಖಾನೆ ಮುಚ್ಚುವ ತೀರ್ಮಾನಕ್ಕೆ ಬಂದಿದೆ.
ಇದನ್ನೂ ಓದಿ: 102 ವರ್ಷಗಳ ಹಳೆಯ ಭದ್ರಾವತಿ ಕಬ್ಬಿಣ, ಉಕ್ಕಿನ ಕಾರ್ಖಾನೆ ಮುಚ್ಚಲು ತೀರ್ಮಾನ: ಕೇಂದ್ರದ ಹೇಳಿಕೆ.. ಕಾಂಗ್ರೆಸ್ ಟೀಕೆ