ಶಿವಮೊಗ್ಗ: ಭದ್ರಾ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಮೂಲಕ 6.500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಅಣೆಕಟ್ಟೆಯ ಗರಿಷ್ಟ ಎತ್ತರ 186 ಅಡಿ ಇದ್ದು, ಜಲಾಶಯದಲ್ಲಿ ಸದ್ಯ175 ಅಡಿ ನೀರು ಸಂಗ್ರಹವಿದೆ.
ಅಣೆಕಟ್ಟೆಯಲ್ಲಿ 183 ಅಡಿ ನೀರು ಸಂಗ್ರಹವಾಗುತ್ತಿದ್ದಂತೆಯೇ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಈ ಭಾರಿ ಇನ್ನೂ 175 ಅಡಿ ಇರುವಾಗಲೇ ನದಿಗೆ ನೀರು ಬಿಡುಗಡೆ ಮಾಡಿರುವುದು ಅಚ್ಚರಿ ತಂದಿದೆ.
ಭದ್ರಾ ಅಣೆಕಟ್ಟೆಯಲ್ಲಿ ನಿನ್ನೆ ಬೆಳಗ್ಗೆ 172 ಅಡಿ ನೀರು ಸಂಗ್ರಹವಾಗಿದ್ದು, ನಂತರ ಅಣೆಕಟ್ಟೆಗೆ ಸುಮಾರು 5 ಅಡಿ ನೀರು ಬಂದಿದೆ. ಇದರಿಂದ ಅಣೆಕಟ್ಟೆಯಲ್ಲಿ ನೀರು ಹೆಚ್ಚಾದರೆ ಮುಂದಿನ ದಿನಗಳಲ್ಲಿ ನದಿಗೆ ನೀರು ಬಿಟ್ಟಾಗ ನದಿ ಪಾತ್ರದಲ್ಲಿರುವ ಪ್ರದೇಶಗಳಿಗೆ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ನದಿಗೆ ನೀರು ಬಿಡುವ ನಿರ್ಧಾರ ತೆಗೆದು ಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ ಮಾಡುವ ಮುನ್ನ ಭದ್ರೆಗೆ ಪೂಜೆ ಸಲ್ಲಿಸಲಾಯಿತು. ನಂತರ ಡ್ಯಾಂನ ಮಧ್ಯದ ಗೇಟನ್ನು ಮೊದಲು ತೆರೆಯಲಾತಯಿತು. ಡ್ಯಾಂನಿಂದ ನೀರು ಹೊರಗಡೆ ಬರುತ್ತಿದ್ದಂತೆ ನೆರೆದಿದ್ದ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದರು.