ಶಿವಮೊಗ್ಗ: ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಸಂಸದ ರಾಘವೇಂದ್ರ ಅವರ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. ಶಿವಮೊಗ್ಗದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಮರಳು ಗಣಿಗಾರಿಕೆಗೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಜೂನ್ 5ರಂದೇ ಮರಳು ಕ್ವಾರಿಯಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಆದರೆ, ಹೊಸನಗರದ ಸುತ್ತ ಮರಳು ಗಣಿಕಾರಿಕೆ ನಿಷೇಧ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ. ಮರಳು ಗುತ್ತಿಗೆಯನ್ನು 3ನೇ ದರ್ಜೆ ಗುತ್ತಿಗೆದಾರರಿಗೆ ನೀಡುವಂತಿಲ್ಲ. ಆದರೆ, ಹೊಸನಗರದಲ್ಲಿ 3ನೇ ದರ್ಜೆ ಗುತ್ತಿಗೆದಾರ ಶರತ್ ಶೆಟ್ಟಿಗೆ ಮರಳು ತೆಗೆಯಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು.
ಶರತ್ ಎಂಬಾತನ ಮೇಲೆ ಹಲವು ಕೇಸ್ಗಳಿವೆ. ಇಷ್ಟೆಲ್ಲ ಮಾಹಿತಿ ಇದ್ದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂಸದ ರಾಘವೇಂದ್ರ ಹಾಗೂ ಶಾಸಕ ಹಾಲಪ್ಪ ಅವರು ಹೇಳಿದರೆ ಡಿಸಿ ಅವರು ಅನಧಿಕೃತವಾದ ಕ್ವಾರಿ ಮುಚ್ಚಿಸಿ ಬಿಡುತ್ತಾರೆ ಎಂದರು. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯ ಬಗ್ಗೆ ಡಿಸಿ ಕ್ರಮ ತೆಗೆದುಕೊಳ್ಳದಿದ್ದರೆ, ಹೋರಾಟ ನಡೆಸುವುದಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.
‘ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ’
ರಾಜ್ಯ ಸರ್ಕಾರ ಕೊರೊನಾ ವಿಚಾರದಲ್ಲಿ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಕೊರೊನಾ ಲಸಿಕೆ ನೀಡದೆ, ಜನರನ್ನು ಕೊಲೆ ಮಾಡಿದ್ದಾರೆ. ಇದು ಕೊಲೆಗಡುಕ ಸರ್ಕಾರವಾಗಿದೆ ಎಂದರು. ಶಿವಮೊಗ್ಗ ಸೇರಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಕೊರೊನಾ ಸಾವು ಉಂಟಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನ ಸಾವನ್ನಪ್ಪಿರುವ ಬಗ್ಗೆ ಸಚಿವ ಸುಧಾಕರ್ ಅವರೇ ತಿಳಿಸಿದ್ದಾರೆ. ಕೊರೊನಾ ನಿಯಂತ್ರಿಸುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.