ಶಿವಮೊಗ್ಗ : ಹಿಂದುತ್ವದ ಹೆಸರಿನಲ್ಲಿ ಆಡಳಿತಕ್ಕೆ ಬಂದ ಬಿಜೆಪಿಯವರು ದೇವಸ್ಥಾನ ಕೆಡವಿದಾಗ ಎಲ್ಲಿ ಹೋಗಿದ್ದರು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದಿಷ್ಟು ಜನ ಹಿಂದುತ್ವವಾದಿಗಳು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ದೇವಸ್ಥಾನ ಕೆಡವಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಹಾಕುತ್ತಿದ್ದರು. ಅದೇ ದೇವಸ್ಥಾನವನ್ನು ಯಾವುದೋ ಮುಸ್ಲಿಂ ಅಧಿಕಾರಿ ಕೆಡವಿದ್ದರೆ ರಾಜ್ಯದಲ್ಲಿ ಈಗಾಗಲೇ ಬೆಂಕಿ ಹೊತ್ತಿ ಉರಿಯುತ್ತಿತ್ತು. ಪುರಾತನ ದೇವಾಲಯಗಳನ್ನು ಕೆಡವಿದಾಗ ಏಕೆ ಯಾರೂ ಮಾತನಾಡುತ್ತಿಲ್ಲ ಎಂದರು.
ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ದುರಂತ : ಹಿಂದುತ್ವದ ಕವಚವನ್ನು ಹೊತ್ತಿಕೊಂಡವವರು ಏಕೆ ದೇವಾಲಯ ಕೆಡವಿರುವುದರ ಬಗ್ಗೆ ಮಾತನಾಡುತ್ತಿಲ್ಲ. ಇದರಲ್ಲೇ ಗೊತ್ತಾಗುತ್ತದೆ ಇವರ ಹಿಂದುತ್ವದ ಡೋಂಗಿತನ. ಮುಸ್ಲಿಮರು ಯಾರಾದರೂ ಅತ್ಯಾಚಾರ, ದೇವಾಲಯ ಕೆಡವಿದರೆ ಮಾತ್ರ ಬಿಜೆಪಿಯವರು ಧ್ವನಿ ಎತ್ತುತ್ತಾರೆ, ಇಲ್ಲವಾದರೆ ಇಲ್ಲ ಎಂದರು.
ಪಿಎಂಗೆ ಶುಭ ಕೋರಿದ ಮಾಜಿ ಶಾಸಕ : ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಬೆಲೆ ಏರಿಕೆ ಬಿಸಿ ಕಡಿಮೆ ಮಾಡಿ ಉತ್ತಮ ಸಂದೇಶ ನೀಡಲಿ ಎಂದು ಶುಭ ಕೋರಿದರು.
ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ತಲೆದೂರಿದೆ. ಈ ವಿಚಾರದ ಬಗ್ಗೆ ಕೇಂದ್ರದ ಮಂತ್ರಿಗಳ ಜೊತೆ ಮಾತನಾಡುವುದನ್ನು ಬಿಟ್ಟು ಸಂಸದ ಬಿ ವೈ ರಾಘವೇಂದ್ರ ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಅಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವುದರ ಬಗ್ಗೆ ಚಿಂತೆಯಲ್ಲಿದ್ದಾರೋ ಏನೋ ಎಂದು ಬೇಳೂರು ವ್ಯಂಗ್ಯವಾಡಿದರು.