ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುವವರು ಅಕ್ಷರಶಃ ನಲುಗಿಹೋಗಿದ್ದಾರೆ. ಕಳೆದ 6 ತಿಂಗಳಿನಿಂದ ತಮ್ಮ ವ್ಯಾಪಾರ- ವಹಿವಾಟು ಬಂದ್ ಮಾಡಿಕೊಂಡು ಸಾಲದಲ್ಲಿ ಜೀವನ ನಡೆಸುವಂತೆ ಆಗಿದೆ.
ಒಂದು ಕಡೆ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಕಟ್ಟಡಕ್ಕೆ ಬಾಡಿಗೆ ಕಟ್ಟಬೇಕು, ವಿದ್ಯುತ್ ಬಿಲ್, ಸಾಲದ ಕಂತು ಕಟ್ಟಬೇಕು. ಹೀಗೆ ಇವರ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಸರ್ಕಾರ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ಲೈಸೆನ್ಸ್ ನವೀಕರಣಕ್ಕೆ ಆದೇಶ ನೀಡಿದೆ. ಲೈಸೆನ್ಸ್ ನವೀಕರಣದ ಶೇ.50 ರಷ್ಟು ಹಣವನ್ನು ಈಗ ಕಟ್ಟಿ, ಡಿಸೆಂಬರ್ನಲ್ಲಿ ಉಳಿದ ಶೇ 50 ರಷ್ಟು ಹಣವನ್ನು ಕಟ್ಟಲು ಸೂಚಿಸಿದೆ. ಹೀಗಾಗಿ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಎಂಆರ್ಪಿಯಲ್ಲಿ ಮಾರಾಟಕ್ಕೆ ಸೂಚನೆ:
ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ತೆರೆಯಲು ಅನುಮತಿ ನೀಡಿದ್ದು, ಆದರೆ ಮದ್ಯವನ್ನು ಎಂಆರ್ಪಿ ದರದಂತೆ ಮಾರಾಟ ಮಾಡಲು ಸೂಚಿಸಿದೆ. ಇದರಿಂದ ಬಾರ್ ಮಾಲೀಕರಿಗೆ ಲಾಭಕ್ಕಿಂತ ನಷ್ಟವೇ ಅಧಿಕವಾಗಿದೆ. ಎಂಆರ್ಪಿಯಲ್ಲಿ ಮಾರಾಟ ಮಾಡಿದರೆ, ಮಾರಾಟದ ಶೇ.15 ರಷ್ಟು ಲಾಭ ಗಳಿಸಬಹುದು. ಇದರಿಂದ ತಿಂಗಳಿಗೆ 40 ಸಾವಿರದಷ್ಟು ಹಣ ಬಂದರೂ ಸಹ, ಬಾಡಿಗೆ, ವಿದ್ಯುತ್ ಬಿಲ್, ಕೆಲಸಗಾರರಿಗೆ ಸಂಬಳ ನೀಡಲು ಆಗುತ್ತಿಲ್ಲ ಎನ್ನುವುದು ಬಾರ್ ಮಾಲೀಕರ ಅಳಲು.
ಊಟಕ್ಕಿದೆ ಅವಕಾಶ:
ಸದ್ಯ ಜಿಲ್ಲೆಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಕುಳಿತು ಕುಡಿಯಲು ಅವಕಾಶ ನೀಡಿಲ್ಲ. ಕೆಲವು ಕಡೆ ಊಟವನ್ನು ಪಾರ್ಸಲ್ ನೀಡಲು ಅವಕಾಶ ನೀಡಲಾಗಿದೆ. ಇನ್ನೂ ಕೆಲವು ಬಾರ್ ಮಾಲೀಕರು ಕೇವಲ ಮದ್ಯವನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ. ಫುಡ್ ಪಾರ್ಸಲ್ ನೀಡಲಾಗುತ್ತಿಲ್ಲ. ಇದು ಬಾರ್ ನಡೆಸುವವರಿಗೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿದೆ. ಕಾರಣ ಟೇಬಲ್ನಲ್ಲಿ ಕುಳಿತು ಕುಡಿಯಲು ಪ್ರಾರಂಭ ಮಾಡಿದಾಗ ಆತ ಊಟಕ್ಕೆ ಆರ್ಡರ್ ಮಾಡ್ತಾನೆ. ಇದರಿಂದ ಲಾಭ ಹೆಚ್ಚಾಗುತ್ತದೆ. ಆದರೆ, ಅದಕ್ಕೆ ಈಗ ಅವಕಾಶ ಇಲ್ಲದ ಕಾರಣ, ಊಟ ಹಾಗೂ ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗುವುದರಿಂದ ಲಾಭ ಸಿಗುವುದಿಲ್ಲ. ಲಾಭ ಇಲ್ಲದೆ ಹೋದರೆ, ಕೌಂಟರ್ನಿಂದ ಸಪ್ಲೈಯರ್ಸ್, ಅಡುಗೆ ಭಟ್ಟರು, ಟೇಬಲ್ ಕ್ಲಿನರ್ಸ್ ಸೇರಿದಂತೆ ಇತರೆ ಖರ್ಚುಗಳನ್ನು ನೋಡಿಕೊಳ್ಳುವುದು ಕಷ್ಟಗುತ್ತದೆ. ಇದರಿಂದ ರೆಸ್ಟೋರೆಂಟ್ ನಡೆಸುವುದು ದುಸ್ತರವಾಗಿದೆ.
ಶಿವಮೊಗ್ಗದ ಪಿಂಗಾರ ಬಾರ್ ಆ್ಯಂಡ್ ರೆಸ್ಟೋರೆಂಟ್ನವರು ಪ್ರತಿ ತಿಂಗಳು ಬಾಡಿಗೆಯಾಗಿ 1.25 ಲಕ್ಷ ರೂ. ಕಟ್ಟಬೇಕು. ಕೆಲಸಗಾರರಿಗೆ ಸಂಬಳ, ವಿದ್ಯುತ್ ಬಿಲ್, ಸಾಲ ಮರುಪಾವತಿ ಮಾಡಬೇಕಿದೆ. ಈ ನಡುವೆ ಕೇವಲ ಎಂಆರ್ಪಿ ಹಾಗೂ ಊಟ ಪಾರ್ಸಲ್ ಅಂತ ಅಂದ್ರೆ, ನಾವು ಜೀವನ ನಡೆಸಲು ಕಷ್ಟವಾಗುತ್ತದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ 20 ಜನ ಒಂದು ಕಡೆ ಕೆಲಸ ಮಾಡುತ್ತಿದ್ದರು. ಈಗ ಇದರಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅದು ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಸಹ ನಮಗೆ ಕೆಲಸ ನೀಡಿ ಎಂದು ಮನವಿ ಮಾಡಿದ್ದಾರೆ. ಬಾರ್ನಲ್ಲಿ ಟೇಬಲ್ ಹಾಗೂ ಚೇರ್ಗಳು ಮೂಲೆ ಸೇರಿವೆ. ಅಲ್ಲದೆ ಕೆಲ ವಸ್ತುಗಳು ಉಪಯೋಗಕ್ಕೆ ಬಾರದಂತಾಗಿವೆ.
ಬಾರ್ ಪೂರ್ಣ ಪ್ರಮಾಣದಲ್ಲಿ ತೆಗೆಯುವ ನಿರೀಕ್ಷೆ...
ಜಿಲ್ಲೆಯಲ್ಲಿ ಸುಮಾರು 69 ಬಾರ್ ಮತ್ತು ರೆಸ್ಟೋರೆಂಟ್ಗಳಿವೆ. ಇವುಗಳನ್ನು ಸರ್ಕಾರ ಕೋವಿಡ್ನಿಂದಾಗಿ 5 ತಿಂಗಳಿನಿಂದ ಬಾಗಿಲು ಮುಚ್ಚಿಸಿದೆ. ಕೆಲವು ಕಡೆ ಊಟವನ್ನು ಹಾಗೂ ಮದ್ಯವನ್ನು ಪಾರ್ಸಲ್ ನೀಡಲು ಸೂಚಿಸಿದೆ. ಸರ್ಕಾರ ಬಸ್ ಸಂಚಾರಕ್ಕೆ ಅವಕಾಶ ನೀಡಿದೆ. ಆದರೆ ನಮ್ಮ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಅವಕಾಶ ನೀಡುತ್ತಿಲ್ಲ. ಇದು ತಾರತಮ್ಯವಾಗಿದೆ. ನಮಗೆ ಅಬಕಾರಿ ಇಲಾಖೆಯವರು ಸೂಚಿಸಿರುವ ಎಲ್ಲಾ ನಿಯಮಗಳ ಅನುಸಾರ ಕಾರ್ಯಾರಂಭ ಮಾಡಲು ತಯಾರಿದ್ದೇವೆ. ಸರ್ಕಾರ ತಕ್ಷಣ ನಮಗೆ ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆರೆಯಲು ಅವಕಾಶ ನೀಡಬೇಕು ಎನ್ನುತ್ತಾರೆ ಪಿಂಗಾರ್ ಬಾರ್ ಮತ್ತು ರೆಸ್ಟೋರೆಂಟ್ನ ಮಾಲೀಕರಾದ ರಾಜಮಾಣಿಕ್ಯ.
ಬಾರ್ನಲ್ಲಿ ಕೆಲಸ ಮಾಡುವ ಮಾಣಿಗಳು ಸಹ ಬೇರೆ ಕೆಲಸ ತಿಳಿಯದೆ, ಈಗ ಬಾರ್ ಮಾಲೀಕರ ಬಳಿ ಬಂದು ಕೆಲಸಕ್ಕೆ ಬರುವುದಾಗಿ ವಿನಂತಿಸುತ್ತಿದ್ದಾರೆ. ಸರ್ಕಾರ ಮೊದಲಿನಂತೆಯೇ ಬಾರ್ ತೆರೆಯಲು ಅವಕಾಶ ನೀಡಿದರೆ, ನಾವು ಸಹಾ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬಾರ್ ಕಾರ್ಮಿಕ ರಾಘವೇಂದ್ರ ಶೆಟ್ಟಿ.
ಒಟ್ಟಾರೆ, ಸರ್ಕಾರ ಮತ್ತು ರೆಸ್ಟೋರೆಂಟ್ ಮಾಲೀಕರುಗಳಿಗೆ ಅನುಕೂಲವಾಗುವಂತಹ ಸೂಚನೆ ನೀಡಿ, ಬಾರ್ ಪೂರ್ಣ ಪ್ರಮಾಣದಲ್ಲಿ ತೆರೆಯುವಂತೆ ಸೂಚನೆ ನೀಡಲಿ ಎನ್ನುವುದು ಒತ್ತಾಯ ಕೇಳಿಬಂದಿದೆ.