ಶಿವಮೊಗ್ಗ: ಒಳ ಮೀಸಲಾತಿ ಕಡಿತ ಖಂಡಿಸಿ ಹಾಗೂ ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧನವಾಗಿರುವ ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ನಗರದ ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮಹತ್ವದ ಸಭೆ ನಡೆಯಿತು. ಇದೇ ವೇಳೆ ಮುಂದೆ ನಡೆಯುವ ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಮೀಸಲಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾನ್ಯನಾಯ್ಕ ಮಾತನಾಡಿ, ಮಾ.30 ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಂದು ಧರಣಿ ನಡೆಯುವ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಅಥವಾ ಸಂಸದ ಬಿ.ವೈ ರಾಘವೇಂದ್ರ ಯಾರಾದರು ಒಬ್ಬರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣದಲ್ಲಿ ಬಂಧನವಾಗಿರುವ ಯುವಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲವಾದರೇ ಅನಿರ್ದಿಷ್ಟ ಅವಧಿಯವರೆಗೆ ಧರಣಿ ಮಾಡಲಾಗುತ್ತದೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಧರಣಿಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಸೇರಿ ಸುಮಾರು 10 ಸಾವಿರ ಜನ ಸೇರುತ್ತಾರೆ ಎಂದು ಹೇಳಿದರು.
ಬಂಜಾರ್ ಸಮುದಾಯಕ್ಕೆ ಒಳ ಮೀಸಲಾತಿ ಕಡಿತಗೊಳಿಸಿರುವುದನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ್ ರಾಜಾವತ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ಪಿಂಡ ಪ್ರಧಾನ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ವಿನಯ್ ರಾಜಾವತ್ ಮನವೊಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಂಡ ಪ್ರಧಾನ ಕಾರ್ಯಕ್ರಮವನ್ನು ಇಂದು ಕೈ ಬಿಡುತ್ತಿದ್ದೇನೆ. 30ನೇ ತಾರೀಖಿನಂದು ಪಿಂಡ ಪ್ರಧಾನ ಮಾಡುತ್ತೇನೆ ಎಂದು ಹೇಳಿದರು.
ಇನ್ನು ಸಭೆಯಲ್ಲಿ ಬಂಜಾರ ಸಮುದಾಯ ಮುಖಂಡರು ಹಾಗೂ ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ರೈಲು ತಡೆಗೆ ಯತ್ನ: ಶಿವಮೊಗ್ಗದಲ್ಲಿ ಎನ್ಎಸ್ಯುಐ ಕಾರ್ಯಕರ್ತರಿಂದ ಪ್ರತಿಭಟನೆ
ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಸಂಬಂಧ ಮೂವರಿಗೆ ನ್ಯಾಯಾಂಗ ಬಂಧನ: ಶಿಕಾರಿಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 18 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಮೂವರನ್ನು ಸೋಮವಾರ ಶಿಕಾರಿಪುರ ಟೌನ್ ಪೊಲೀಸರು ಬಂಧಿಸಿದ್ದರು. ರಾಘವೇಂದ್ರ ನಾಯ್ಕ, ಪುನೀತ್ ನಾಯ್ಕ ಹಾಗೂ ಕುಮಾರನಾಯ್ಕ ಬಂಧಿತರಾಗಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಸದ್ಯ ಮೂವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಸೋಮವಾರ ನಡೆದ ಗಲಾಟೆಯ ದೃಶ್ಯವನ್ನು ಪರಿಶೀಲಿಸುತ್ತಿರುವ ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಮಂಗಳವಾರವೂ ಮುಂದುವರೆದ ಪ್ರತಿಭಟನೆ: ಸದಾಶಿವ ವರದಿ ಜಾರಿ ಮಾಡುವುದನ್ನು ವಿರೋಧಿಸಿ ಕುಂಚೇನಹಳ್ಳಿಯಲ್ಲಿ ಮಂಗಳವಾರ ಸಹ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗ-ಸವಳಂಗ ರಸ್ತೆ ತಡೆದು ಪ್ರತಿಭಟನೆ ನಡೆಸಿದ ತಾಂಡಾ ನಿವಾಸಿಗರು, ಟೈರ್ ಸುಟ್ಟು ಆಕ್ರೋಶ ಹೊರಹಾಕಿದ್ದರು. ಶಿವಮೊಗ್ಗ ಹಾಗೂ ಸವಳಂಗ ರಸ್ತೆಯನ್ನು ಸುಮಾರು 1 ಗಂಟೆ ಕಾಲ ತಡೆದು ಪ್ರತಿಭಟನೆ ನಡೆಸಿದ್ದರು.