ಶಿವಮೊಗ್ಗ: ಬೆಂಗಳೂರಿನಲ್ಲಿನ ರಾಜ್ಯ ಬಲಿಜ ಟ್ರಸ್ಟ್ ಗೆ ಸೇರಿದ, ದತ್ತಿ ಆಸ್ತಿಯನ್ನು ಕಬಳಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಬಲಿಜ ಸೇವಾ ಸಂಘದ ಸದಸ್ಯರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬಲಿಜ ಸಮಾಜದ ಸದಸ್ಯರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಬಲಿಜ ಸಮುದಾಯದ ಬಡ ವಿದ್ಯಾರ್ಥಿಗಳ ಏಳಿಗೆಗಾಗಿ, ಮೀಸಲಾಗಿರುವ ಆನೇಕಲ್ ತಿಮ್ಮಯ್ಯ ಚಾರಿಟಿಸ್ ಟ್ರಸ್ಟ್ ನ ದತ್ತಿ ಆಸ್ತಿಯನ್ನು ಎಲ್.ಆರ್.ಶಿವರಾಮೇಗೌಡ ಕಬಳಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಎಲ್.ಆರ್.ಶಿವರಾಮೇಗೌಡ ಬಾಡಿಗೆದಾರನಾಗಿ ಸೇರಿಕೊಂಡಿದ್ದು, ಹಲವಾರು ವರ್ಷಗಳಿಂದ ಒಂದು ಪೈಸೆಯೂ ಬಾಡಿಗೆ ನೀಡದೆ, ಕೋಟ್ಯಂತರ ರೂ. ಬಾಡಿಗೆ ಉಳಿಸಿಕೊಂಡು ಬಂದಿದ್ದಾರೆ. ಅಲ್ಲದೇ, ದತ್ತಿ ಆಸ್ತಿಯ ಉಳಿದ ಜಾಗವನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿ, ಅದನ್ನು ಪ್ರಶ್ನಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ಸಂಘದ ಪದಾಧಿಕಾರಿಗಳನ್ನು ಗೂಂಡಾಗಳೆಂದು ಅವಮಾನಿಸಿ, ಸುಳ್ಳು ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ದೂರಿದ್ದಾರೆ.
ಇದು ಬಲಿಜಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದ್ದು. ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಇವರು ಕಬಳಿಸಿರುವ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್ ನ ದತ್ತಿ ಆಸ್ತಿಯನ್ನು ತೆರವುಗೊಳಿಸಿ, ಬಾಕಿ ಕೊಡಬೇಕಾದ ಬಾಡಿಗೆಯನ್ನು ಪಾವತಿಸಿ, ಬಲಿಜ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದಾರೆ.