ಶಿವಮೊಗ್ಗ: ನಮ್ ಊರಿಗೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ಕೊಡ್ಸಿ ಸರ್ ಅಂತ ಪುಟ್ಟ ಬಾಲಕಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾಳೆ. ಸಾಗರ ತಾಲೂಕು ಉರಳಗಲ್ಲು ಗ್ರಾಮದ ಸಾನ್ವಿ ಎಂಬ ನಾಲ್ಕು ವರ್ಷದ ಪುಟ್ಟ ಬಾಲಕಿ ತನ್ನ ತೂದಲು ಮಾತುಗಳಿಂದಲೇ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ.
ಸಾನ್ವಿ ಅಂಗನವಾಡಿಗೆ ಹೋಗಬೇಕು ಅಂದ್ರೆ 12 ಕಿಮೀ ದೂರ ಸಾಗಬೇಕು. ಅಂಗನವಾಡಿಗೆ ಹೋಗುವ ಉದ್ದೇಶದಿಂದ ತನ್ನ ತಂದೆ- ತಾಯಿಯನ್ನು ಬಿಟ್ಟು ಅಜ್ಜಿ ಮನೆಗೆ ಹೋಗಿ ಇದ್ದಾಳೆ. ಉರುಳಗಲ್ಲು ಗ್ರಾಮ ಶರಾವತಿ ನದಿ ಹಿನ್ನೀರಿನ ದ್ವೀಪ ಪ್ರದೇಶದಲ್ಲಿದೆ. ಇಲ್ಲಿ ರಸ್ತೆ ಇಲ್ಲ, ಅರಣ್ಯ ಪ್ರದೇಶದಲ್ಲಿ ಇರುವ ಪುಟ್ಟ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ್ರು ಸಹ ಇನ್ನೂ ರಸ್ತೆ, ನೀರಿನ ಸಂಪರ್ಕವಿಲ್ಲ. ಇದು ಕೇವಲ ಸಾನ್ವಿಯ ಕಥೆ ಅಲ್ಲ, ಈ ಗ್ರಾಮದ ಎಲ್ಲಾ ಮಕ್ಕಳು ಸಹ ತನ್ನ ವಿದ್ಯಾಭ್ಯಾಸಕ್ಕಾಗಿ ಹೆತ್ತವರನ್ನು ಬಿಟ್ಟು ಹಾಸ್ಟೆಲ್ ಗೆ ಸೇರುವ ಅನಿವಾರ್ಯತೆಯಲ್ಲಿದ್ದಾರೆ.
ಇತ್ತೀಚೆಗೆ ಇದೇ ಗ್ರಾಮದ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು ಎಂದು ಗ್ರಾಮದ ಯುವಕರು ಮರ ಕಡಿದ ರಸ್ತೆ ತೆರವು ಮಾಡಿದಕ್ಕೆ ಅವರುಗಳ ಮೇಲೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದರು. ಅರಣ್ಯ ಇಲಾಖೆ ಹಾಗೂ ಆಡಳಿತದವರ ವಿರುದ್ಧ ಗ್ರಾಮಸ್ಥರು ಮೊನ್ನೆ ಪಾದಯಾತ್ರೆ ನಡೆಸಿದ್ದರು. ಇದರಿಂದ ಡಿಸಿಯವರು ಇದೇ ತಿಂಗಳ 12 ಕ್ಕೆ ಉರಳಗಲ್ಲು ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಪುಟ್ಟ ಬಾಲಕಿ ಸಾನ್ವಿಯ ಮಾತು ತೂದಲು ಇದ್ರು ಸಹ ಆಕೆಯ ಬೇಡಿಕೆ ಮಾತ್ರ ಸರಿಯಾಗಿಯೇ ಇದೆ.
ಇದನ್ನೂ ಓದಿ: ಚಿಕ್ಕಮಗಳೂರು: ಧಾರಾಕಾರ ಮಳೆಗೆ ಭತ್ತದ ಗದ್ದೆಯಲ್ಲಿ ಭೂ ಕುಸಿತ