ಶಿವಮೊಗ್ಗ: ಈ ಬಾರಿಯ ಚುನಾವಣೆಗೆ ಸ್ಫರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಿವಮೊಗ್ಗ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು. ನಗರದ ಮಥುರಾ ಪ್ಯಾರಡೈಸ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂಬ ಇಚ್ಚೆಯ ಹಿನ್ನೆಲೆಯಲ್ಲಿ ನನ್ನ ಭಾವನೆಗಳನ್ನು ಸಾರ್ವತ್ರಿಕವಾಗಿ ಪ್ರಕಟ ಮಾಡಿದ್ದೆ. ಪಕ್ಷದ ವೇದಿಕೆಯಲ್ಲಿಯೂ ವಿನಂತಿ ಮಾಡಿಕೊಂಡಿದ್ದೇನೆ. ಆದರೆ ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಆಡಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅವರ ಏಕವಚನ ಪ್ರಯೋಗ ಅವರ ಶಿಕ್ಷಣ ಮಟ್ಟ ತೋರಿಸುತ್ತದೆ. ಅವರ ಮಾತಿಗೆ ಅನುಕಂಪವಿದೆ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ಬಾರಿ ಸ್ಪರ್ಧೆ ಖಚಿತ ಎಂದರು. ಈಶ್ವರಪ್ಪ ನಾಲಿಗೆ ಮೇಲೆ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಅವನ್ಯಾವ ಲೆಕ್ಕ ಎಂದು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಖಚಿತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಬಗ್ಗೆ ಯಕಶ್ಚಿತ್ ಆಗಿ ಮಾತನಾಡಿದ ಈಶ್ವರಪ್ಪ ಪ್ರಭಾವಿ ನಾಯಕ. ಅವರು ಶಿವಮೊಗ್ಗ ಬಿಟ್ಟರೆ ಬೇರೆಲ್ಲೂ ಗೆಲ್ಲಲು ಆಗದ ಪ್ರಭಾವಿ ನಾಯಕ ಎಂದು ಲೇವಡಿ ಮಾಡಿದರು.
ನೀವು ಮತ್ತೆ ನಿಮ್ಮ ಮಗ ಚುನಾವಣೆಗೆ ಬರಲೇಬೇಕು. ಸಂಕೋಚ ಬಿಟ್ಟು ಈ ಬಾರಿ ತಮ್ಮಮಗನಿಗೆ ಟಿಕೆಟ್ ಕೇಳಿದ್ದೀರಿ. ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ರುದ್ರೇಗೌಡರು, ಗಿರೀಶ್ ಪಟೇಲ್, ಸಿದ್ದರಾಮಣ್ಣ ಅವರಿಗೆ ಟಿಕೆಟ್ ಕೇಳಿಲ್ಲ ನಿಮ್ಮ ಮಗನಿಗೆ ಟಿಕೆಟ್ ಕೇಳಿದ್ದೀರಿ. ಈಶ್ವರಪ್ಪ ಅಥವಾ ಅವರ ಮಗ ಚುನಾವಣೆಗೆ ಬರಲಿ ರಾಜಕೀಯದ ಲೆಕ್ಕಗಳನ್ನು ಕೊಡುತ್ತೇನೆ. ಹಾಗೆಯೇ ಎಣಿಸಿಕೊಳ್ಳಲು ಕೊಡುತ್ತೇನೆ. ನಿಮ್ಮ ಗೋಡೌನ್ ನಲ್ಲಿ ಇರುವ ಎಣಿಕೆ ಮೆಷಿನ್‌ಗಳನ್ನು ತರಬೇಕಾಗುತ್ತೆ. ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ ಇದೆ. ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅಧಿವೇಶನಕ್ಕೆ ಬರಲಿಲ್ಲ. ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಮಂತ್ರಿಯಾಗಿದ್ದ ಈಶ್ವರಪ್ಪ ಒಂದು ದಿನವೂ ಹೆಲಿಪ್ಯಾಡ್ಗೆ ಬಂದು ಸ್ವಾಗತಿಸಲಿಲ್ಲ. ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿಲ್ಲ. ಯಡಿಯೂರಪ್ಪ ಮೇಲೆ ಆರೋಪ ಬಂದು ಜೈಲಿಗೆ ಹೋದಾಗ ಇಂತ ಸ್ಥಿತಿ ಬಂದರೆ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದೀರಿ. ನಿಮ್ಮ ಮೇಲೆ ಆರೋಪ ಬಂದಾಗ ನೇಣು ಹಾಕಿಕೊಳ್ಳುವುದಿರಲಿ ನೇಣು ಹಗ್ಗವನ್ನೂ ತರಲಿಲ್ಲ. ನನ್ನ 26 ವರ್ಷದ ರಾಜಕಾರಣದಲ್ಲಿ ಯಾವುದೇ ಕಳಂಕ ಬಂದಿಲ್ಲ. ಈಶ್ವರಪ್ಪ ಅವರಿಗೆ ಇನ್ನು ಲೆಕ್ಕ ಕೊಡಲು ಆರಂಭಿಸುತ್ತೇನೆ. ಲೆಕ್ಕ ಹಾಕಲು ನಿಮ್ಮ ಗೋಡಾನ್‌ನಲ್ಲಿರುವ ಎಣಿಕೆ ಮೆಷಿನ್ ಹೊರಗೆ ತೆಗೆಯಿರಿ. ಒಂದು ವೇಳೆ ಎಣಿಕೆ ಮೆಷಿನ್ ಸೀಜ್ ಆಗಿದ್ದರೆ ಹೊಸ ಮೆಷಿನ್ ಖರೀದಿಸಿ ಎಂದು ಹರಿಹಾಯ್ದರು.
ಶಿವಮೊಗ್ಗದಲ್ಲಿ ಆಗಿರುವ ಅಭಿವೃದ್ಧಿ ಈಶ್ವರಪ್ಪ ಮಾಡಿಲ್ಲ. ಬದಲಿಗೆ ಅಭಿವೃದ್ಧಿ ಮಾಡಿರುವುದು ಯಡಿಯೂರಪ್ಪ ಹಾಗು ರಾಘವೇಂದ್ರ. 32 ವರ್ಷದ ಅಧಿಕಾರಾವಧಿಯಲ್ಲಿ ಈಶ್ವರಪ್ಪ ಮಾಡಿದ್ದು ಏನೂ ಇಲ್ಲ. ಅಲ್ಲೊಂದು ಕಡೆ ಇಲ್ಲೊಂದು ಕಡೆ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡುತ್ತೀರಿ. ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಶ್ವರಪ್ಪ ನೀಡಿದ ಸವಾಲು ಸ್ವೀಕರಿಸಿದ್ದೇನೆ. ನೀವು ನನ್ನ ಸವಾಲು ಸ್ವೀಕರಿಸುತ್ತೀರೋ ಇಲ್ಲವೋ ಹಿಂದೆ ಸರಿಯುತ್ತೀರೋ ಯೋಚನೆ ಮಾಡಿ ಎಂದರು.
ಸದ್ಯದಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಊರಲ್ಲಿ ಸೊಳ್ಳೆ ಓಡಿಸಲು ಆಗದೆ ಸೊಳ್ಳೆ ಪರದೆ ಹಂಚಿದ್ದ ಕೀರ್ತಿ ಈಶ್ವರಪ್ಪ ಅವರದ್ದು. ಸೊಳ್ಳೆ ಓಡಿಸಲು ಔಷಧ ಹೊಡೆಸಬೇಕು ಅದನ್ನು ಬಿಟ್ಟು ಸೊಳ್ಳೆ ಪರದೆ ಹಂಚಿದ ಏಕೈಕ ಶಾಸಕ ಈಶ್ವರಪ್ಪ ಎಂದು ಟೀಕಿಸಿದರು. ಈಶ್ವರಪ್ಪ ಅವರಿಗೆ ಏನು ಕೊಡಬೇಕು ಎಂಬುದು ಗೊತ್ತಿಲ್ಲ. ಆದರೆ ಏನು ಪಡೆಯಬೇಕು ಎಂಬುದು ಚೆನ್ನಾಗಿ ಗೊತ್ತು. ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಮಲಿನ ಮಾಡುತ್ತಾರೆ. ಹಿಂದು, ಮುಸ್ಲಿಮರು ಯಾರೋ ಸಂಯಮ ಕಳೆದುಕೊಳ್ಳಬಾರದು. ಪೊಲೀಸರು ಮೈಮರೆಯಬಾರದು. ಚುನಾವಣೆ ವೇಳೆ ಒಂದೆರಡು ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೈ-ಕಮಲ ಟಿಕೆಟ್ ಕಗ್ಗಂಟು: ಆಪ್ತರ ಪರ ಜಾರಕಿಹೊಳಿ ಬ್ರದರ್ಸ್ ಬ್ಯಾಟಿಂಗ್