ಶಿವಮೊಗ್ಗ: ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಉಂಟಾಗಿದೆ. ನಾನು ನನ್ನ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ. ತಮ್ನ ಹೊಸ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಇಂದು ಸಭಾಪತಿಗಳ ಬಳಿ ತೆರಳಿ ನಾನು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಭಾಪತಿಗಳು ನನಗೆ ಸಮಯ ನೀಡಿದ್ದಾರೆ. ಇಂದು ಹುಬ್ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಜತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ಮೇಲ್ಮನೆಕ್ಕಿಂತ ಕೆಳಮನೆ ಪರಿಣಾಮಕಾರಿಯಾಗಿದೆ. ಇದರಿಂದ ವಿಧಾನಸಭೆ ಪ್ರವೇಶ ಮಾಡಲು ಬಯಸಿದ್ದೇನೆ. ಎಲ್ಲಾರ ಆಶೋತ್ತರಗಳ ಈಡೇರಿಕೆಗಾಗಿ ವಿಧಾನಸಭೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಮೇಲೆ ಭರವಸೆಯನ್ನಿಟ್ಟು ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಶಿವಮೊಗ್ಗ ಶಾಂತವಾಗಿರಬೇಕು, ಇಬ್ಬಾಗವಾಗಿದೆ. ಅತ್ಯಂತ ಸುಂಸ್ಕೃತ ಸಜ್ಜನಿಕೆಗೆ ಹೆಸರಾಗಿದ್ದ ಶಿವಮೊಗ್ಗ ತನ್ನ ಪರಂಪರೆ ಕಳೆದುಕೊಳ್ಳುತ್ತಿರುವ ಆಂತಕ ದೂರ ಮಾಡಬೇಕಿದೆ. ನನ್ನ ಘೋಷಣೆಯ ನಂತರ ಕೆಲವರ ನಾಲಿಗೆ ಬಂದ್ ಆಗಿದೆ. ಇದು ಮುಂದೆ ಸಾಬೀತು ಆಗಬೇಕು. ಜಾತ್ಯತೀತವಾಗಿ, ಪಕ್ಷಾತೀತವಾಗಿ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಶಿವಮೊಗ್ಗಕ್ಕೆ ರೈಲು, ವಿಮಾನ ಬಂದರೂ ಸಹ ಕೈಗಾರಿಕೋದ್ಯಮಿಗಳು ಶಿವಮೊಗ್ಗಕ್ಕೆ ಬಂದಿಲ್ಲ. ಶಿವಮೊಗ್ಗ ಅಶಾಂತಿ ನಗರ ಎಂದು ಕುಖ್ಯಾತಿ ಪಡೆದಿದೆ. ಗಲಭೆಗಳನ್ನು ನಿಯಂತ್ರಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಕೂಲಿ, ಆಟೋ, ಬೀದಿ ವ್ಯಾಪಾರಿಗಳು ಸಣ್ಣ ಕರ್ಫ್ಯೂನಿಂದಾಗಿ ಉಪವಾಸದಿಂದ ಇರಬೇಕಾಗುತ್ತದೆ ಎಂದು ಆಯನೂರು ಕಳವಳ ವ್ಯಕ್ತಪಡಿಸಿದರು.
ಕುಬೇರರ ಎದುರು ಸ್ಪರ್ಧೆ ಮಾಡಬೇಕಿದೆ: ನನಗೆ ಗೊತ್ತಿದೆ. ನಾನು ಸಾಮಾನ್ಯದವರ ಎದುರು ಸ್ಪರ್ಧೆ ಮಾಡುತ್ತಿಲ್ಲ. ಕುಬೇರ ಪುತ್ರರ ಎದುರಿಗೆ ಸ್ಪರ್ಧೆ ಮಾಡುತ್ತಿದ್ದೇನೆ. 32 ವರ್ಷಗಳ ಏಕತಾನತೆಯ ವಿರುದ್ಧ ಮತಹಾಕುತ್ತಾರೆ ಎಂಬ ನಂಬಿಕೆ ಇದೆ. ಗೆಲ್ಲಿಸುವ ಜವಾಬ್ದಾರಿ ಮತದಾರರ ಮೇಲಿದೆ. ಜಾತಿರಹಿತ ಆಧಾರದ ಮೇಲೆ ನೈಜ ಜನತೆ ಪರವಾಗಿ ಕೆಲಸ ಮಾಡಬೇಕಿದೆ ಎಂದರು.
ನಾನು ಎಲ್ಲಾ ಮತದಾರರ ಅನುಮತಿಯೊಂದಿಗೆ ರಾಜೀನಾಮೆ ನೀಡುತ್ತಿದ್ದೇನೆ. ನಾಳೆ ನಾಮಪತ್ರ ಸಲ್ಲಿಸುತ್ತೇನೆ. ತೆನೆಯನ್ನು ಹೊರುತ್ತೇನೊ, ಶಿವಮೊಗ್ಗದ ಜನತೆ ಭಾರ ಹೊರುತ್ತೇನೋ ಎಂಬುದನ್ನು ಇವತ್ತು ಸಂಜೆ ಹೇಳುತ್ತೇನೆ ಎಂದು ಜೆಡಿಎಸ್ ಸೇರುವ ಕುರಿತು ಪರೋಕ್ಷವಾಗಿ ತಿಳಿಸಿದರು. ಪಕ್ಷೇತರನಾಗಿ ಅಲ್ಲ, ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಪಕ್ಷಕ್ಕೂ ರಾಜೀನಾಮೆ ನೀಡುತ್ತೇನೆ. ನನಗೆ ಶಾಸಕ ಸ್ಥಾನ ಹೊಸದೇನು ಅಲ್ಲ. ಟಿಕೆಟ್, ಶಾಸಕ ಸ್ಥಾನಕ್ಕೆ ಮಾತ್ರವಲ್ಲ. ನಾನು ಹುಟ್ಟಿ ಬೆಳೆದ ನಗರದ ಶಾಂತಿಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
ನಾನು ಟಿಕೆಟ್ಗಾಗಿ ಪಕ್ಷ ಬಿಡುತ್ತೇನೆ. ನದಿಯಂತೆ ನಾನು ರಾಜಕೀಯವಾಗಿ ಹರಿಯುತ್ತೇನೆ. ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಅಲ್ಲಿ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ನಾನು ರಾಜೀನಾಮೆ ನೀಡಲು ಇಂದು ಕೊನೆಯ ದಿನವಾಗಿದೆ. ರಾಜೀನಾಮೆಯ ಗೆಜೆಟ್ ನೋಟಿಫಿಕೇಶನ್ ಬರಬೇಕಿದೆ. ನಾನು ಒಂದು ಚಿಹ್ನೆಯಲ್ಲಿ ಇದ್ದು, ಇನ್ನೊಂದು ಚಿಹ್ನೆಯಲ್ಲಿ ಸ್ಪರ್ಧಿಸಲು ಆಗಲ್ಲ. ಬಿಜೆಪಿ ನಾಯಕರು ಇದುವರೆಗೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾನು ಯಾರ ವಿರುದ್ಧವೂ ಟೀಕೆ ಮಾಡಲ್ಲ. ನನ್ನ ಗುರಿಯ ಕಡೆ ನಾನು ಹೆಜ್ಜೆ ಇಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಸೀಮೆಎಣ್ಣೆ, ಪೆಟ್ರೋಲ್ ಆಗಬಾರದು. ಸಾಧ್ಯವಾದಷ್ಟು ನೀರು ಆಗಬೇಕು. ನಮ್ಮನ್ನು ಬೆಳೆಸಿದ ನಾಯಕ ಯಡಿಯೂರಪ್ಪನವರ ಪರವಾಗಿ ಉತ್ತರ ನೀಡಿದ ಶಾಸಕನಾಗಿದ್ದೇನೆ. ಅವರ ಋಣ ತೀರಿಸಿದ್ದೇನೆ. ನನ್ನ ಮೇಲೆ ಕ್ರಮದ ಬಗ್ಗೆ ಮಾತನಾಡುವವರು ನಗರದಲ್ಲಿ ಶಾಂತಿ ಕದಡುವಾಗ ಏನ್ ಮಾಡ್ತಾ ಇದ್ದರು. ಶೋಕಾಸ್ ನೋಟಿಸ್ಗೆ ಉತ್ತರ ಕೊಟ್ಟಿದ್ದಕ್ಕೆ ನಾನು ನಾಯಕನಾಗಿದ್ದೇನೆ. ಯಾರಾದರೂ ನನ್ನ ಹಾಗೂ ನನ್ನ ಮಗನ ಹೆಸರನ್ನು ಬರೆದಿಟ್ಡು ಆತ್ಮಹತ್ಯೆ ಮಾಡಿಕೊಂಡಿದ್ದರಾ? ಎಂದು ಆಯನೂರು ಪ್ರಶ್ನಿಸಿದರು.
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ: ಪ್ರಧಾನ ಮಂತ್ರಿಗಳ ಘೋಷಣೆ ಮಾಡಿದಂತೆ ಯಾವುದಾದರೂ ಪಕ್ಷದಲ್ಲಿ ನಡೆದಿದೆಯೇ?. ಕುಟುಂಬ ದೂರ ಇಡಬೇಕು ಎಂದು ಹೇಳಿದರು. ಆದರೆ ಅವರು ಕುಟುಂಬವನ್ನು ದೂರ ಇಟ್ಟಿದ್ದಾರೆಯೇ?. ಪಕ್ಷಗಳ ಸಿದ್ಧಾಂತದಿಂದ ರಾಜೀನಾಮೆ ನೀಡುತ್ತಿಲ್ಲ. ಯಾರು ಮಾತನಾಡಿದರು ಸಹ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಹುಟ್ಟಿದ್ದೇ ದೀಪಾವಳಿಯ ಅಮಾವಾಸೆಯಂದು. ಆದ್ದರಿಂದ ನನಗೆ ಅಮಾವಾಸೆ ಒಳ್ಳೆಯದೇ ಎಂದು ಆಯನೂರು ಮಂಜುನಾಥ್ ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ: ಮೋದಿ ಮತ್ತು ಗುಜರಾತ್ ಮಾದರಿಯ ಚುನಾವಣೆ ಇಲ್ಲಿ ನಡೆಯಲು ಸಾಧ್ಯವಿಲ್ಲ: ಆಯನೂರು ಮಂಜುನಾಥ್