ಶಿವಮೊಗ್ಗ: ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಸ್ವಚ್ಛತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಪ್ರಶಸ್ತಿ ಲಭಿಸಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದ್ದಾರೆ.
ಪಾಲಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರವು ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದೆ. ಈ ಪ್ರಶಸ್ತಿ ಲಭಿಸಲು ಶಿವಮೊಗ್ಗ ಜನತೆ ಕಾರಣ. ಅವರಿಗೆ ಅಭಿನಂದನೆಗಳು. ಜೊತೆಗೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಅಧಿಕಾರಿಗಳು ಹೀಗೆ ಎಲ್ಲರೂ ಸಹ ಕಾರಣರಾಗಿದ್ದಾರೆ ಎಂದರು.
ಈ ರೀತಿಯ ಪ್ರಶಸ್ತಿಯನ್ನು ನಾವು ರಾಷ್ಟ್ರಪತಿಯಿಂದ ಪಡೆಯುವಾಗ ನಮಗೆ ಅತ್ಯಂತ ಸಂತೋಷವಾಗಿತ್ತು. ಆ ಸಂತೋಷವನ್ನು ನಮಗೆ ಶಿವಮೊಗ್ಗ ಜನತೆ ನೀಡಿದ್ದಾರೆ. ನಾವು ನಗರವನ್ನು ಇನ್ನಷ್ಟು ಸ್ವಚ್ಛಗೊಳಿಸಿದರೆ, ಅದು ಇನ್ನಷ್ಟು ಸುಂದರವಾಗಿಸುತ್ತದೆ. ಇದಕ್ಕ ಜನತೆಯ ಸಹಕಾರ ಬೇಕು. ಪಾಲಿಕೆಯಿಂದ ಬರುವ ಕಸದ ಗಾಡಿಗೆ ಕಸ ನೀಡಿ ಸಹಕರಿಸಿದರೆ, ನಮಗೆ ಇನ್ನಷ್ಡು ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಎಂದರು.
ನಂತರ ಮಾತನಾಡಿದ ಪಾಲಿಕೆ ಆಯುಕ್ತರಾದ ಮಾಯಾಣ್ಣ ಗೌಡ, ನಾವು ಸರ್ವೇಕ್ಷಣೆಗೆ ಬಂದ ಅಧಿಕಾರಿಗಳ ನಿರೀಕ್ಷೆಯಷ್ಟು ಕೆಲಸ ಮಾಡಲು ಆಗಿಲ್ಲ. ಹಸಿ ಕಸ, ಒಣ ಕಸ, ಯುಜಿಡಿ, ಇ - ಕಸ, ಆಸ್ಪತ್ರೆಯ ಕಸ ಹೀಗೆ ಎಲ್ಲ ವಿಭಾಗಗಳಲ್ಲೂ ಸಹ ಪ್ರತ್ಯೇಕ ಸರ್ವೆ ನಡೆಸಲಾಗುತ್ತದೆ. ಇದರಲ್ಲಿ ನಮಗೆ ಉತ್ತಮ ಅಂಕ ಬಂದ ಕಾರಣಕ್ಕೆ ಪ್ರಶಸ್ತಿ ಲಭಿಸಿದೆ. ನಮ್ಮ ಕೆಲಸ ಇನ್ನಷ್ಡು ಬಾಕಿ ಇದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಈ ವೇಳೆ ಪಾಲಿಕೆ ಸದಸ್ಯರುಗಳು ಹಾಜರಿದ್ದರು.
ಇದನ್ನೂ ಓದಿ: ಮಳೆಗೆ ಹುಬ್ಬಳ್ಳಿ-ಧಾರವಾಡ ತತ್ತರ.. ಪ್ರವಾಹಕ್ಕೆ ಸಿಲುಕಿದ ವ್ಯಕ್ತಿ, ಜನಜೀವನ ಅಸ್ತವ್ಯಸ್ತ