ಶಿವಮೊಗ್ಗ: ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶ್ವಸಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳ 17 ಮತ್ತು 23ನೇ ತಾರೀಖು ಆಟೋರಿಕ್ಷಾ ಹಾಗೂ ಬೈಕ್ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದರು.
ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಮಿಳ್ಳಘಟ್ಟದ ಸ್ಟೀಫನ್ ಕುಮಾರ್ (22), ಆಶ್ರಯ ಬಡಾವಣೆಯ ಮೆಹಬೂಬ್ (34) ಹಾಗೂ ಅಣ್ಣಾನಗರದ ಮುಬಾರಕ್ (27) ಇವರನ್ನು ಬಂಧಿಸಲಾಗಿದೆ. ಬೈಕ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ತಿರುಪಯ್ಯ ಬೀದಿಯ ಚೇತನ್ ಅಲಿಯಾಸ್ ಬ್ರಿಟಿಶ್ (30), ಗುರುರಾಜ್(20) ಇವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಸಹಕಾರ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.