ಶಿವಮೊಗ್ಗ: ಅಡಕೆಗೆ ಭಾರತದಲ್ಲಿ ಸಾಂಪ್ರದಾಯಿಕವಾದ ಸ್ಥಾನವಿದೆ. ಇಂತಹ ಅಡಕೆ ಬೆಳೆಯನ್ನು ಕರ್ನಾಟಕದಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಆದರೆ ಅಡಕೆ ಬೆಳೆಗಾರರು ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಡಕೆ ಮೇಲೆ ಸದಾ ಒಂದು ತೂಗುಗತ್ತಿ ಇದ್ದೇ ಇರುತ್ತದೆ. ಈ ವರ್ಷ ಅಡಕೆ ಬೆಳೆಗಾರರಿಗೆ ಭೂತಾನ್ ಅಡಕೆ ಭೂತದಂತೆ ಕಾಡುತ್ತಿದೆ.
ಹಾಲಿ ವರ್ಷದಲ್ಲಿ ಭಾರತ ಸರ್ಕಾರ ಭೂತನ್ ದೇಶದಿಂದ ಸುಮಾರು 17 ಸಾವಿರ ಮೆಟ್ರಿಕ್ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಭಾರತೀಯ ಅಡಕೆ ಬೆಳೆಗಾರನ್ನು ಚಿಂತೆಗೀಡು ಮಾಡಿದೆ. ಆದರೆ ಹಸಿ ಅಡಿಕೆ ಆಮದು ಆಗುತ್ತಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲವೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಅಡಕೆ ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ನಿಯಂತ್ರಣ ಹಾಕಬೇಕೆಂದು ಒತ್ತಡ ಹಾಕಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಹಾಲಿ ಆಮದು ಅಡಕೆ ಪ್ರತಿ ಕೆ.ಜಿಗೆ 260 ರೂ ತೆರಿಗೆ ವಿಧಿಸಲಾಗಿದ್ದು, ಅದನ್ನು 360ಕ್ಕೆ ಏರಿಸಬೇಕೆಂಬ ಮನವಿ ಮಾಡಲಾಗಿದೆ. ವಿದೇಶದಿಂದ ಸಕ್ರಮ ಹಾಗೂ ಅಕ್ರಮವಾಗಿ ಬರುವ ಅಡಕೆಯನ್ನು ನಿಯಂತ್ರಿಸಬೇಕು. ಇದಕ್ಕಾಗಿ ಒಂದು ತಾಂತ್ರಿಕ ಸಮಿತಿಯನ್ನು ರಚನೆ ಮಾಡಬೇಕೆಂಬ ಒತ್ತಾಯವನ್ನು ಮಾಡಲಾಗಿದೆ ಎಂದು ರಾಜ್ಯ ಅಡಕೆ ಸಹಕಾರ ಮಹಾಮಂಡಲದ ಅಧ್ಯಕ್ಷ ಸುಬ್ರಮಣ್ಯ ಹೇಳಿದ್ದಾರೆ.
ಅಡಕೆಯು ಪೂರೈಕೆಯ ಆಧಾರದ ಮೇಲೆ ಅದರ ಧಾರಣೆ ನಿರ್ಧಾರವಾಗುತ್ತದೆ. ಹಾಲಿ ವಿದೇಶದಿಂದ ಬರುವ ಅಡಕೆ ಪ್ರಮಾಣ ಕಡಿಮೆ ಇದೆ. ಪ್ರತಿ ವರ್ಷ ನಮ್ಮ ದೇಶಕ್ಕೆ ಶೇ 30 ಅಡಕೆ ಕಡಿಮೆ ಪೂರೈಕೆ ಆಗುತ್ತದೆ. ನಮ್ಮ ಮಲೆನಾಡಿನ ಕೆಂಪಡಿಕೆಗೆ ಧಾರಣೆ ಕುಸಿಯುವುದಿಲ್ಲ. ಈ ಬಗ್ಗೆ ಯಾರು ಆಂತಕ್ಕೆ ಒಳಗಾಗಬಾರದು ಎಂದು ಮ್ಯಾನ್ಸ್ಕೊಸ್ ಉಪಾಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ಅಡಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಕೇಂದ್ರದ ಹುನ್ನಾರ: ಹೆಚ್ಡಿಕೆ