ಶಿವಮೊಗ್ಗ: "ನನ್ನ ವಿರುದ್ಧ ದಾಖಲಾಗುತ್ತಿರುವ ದೂರು ಎದುರಿಸುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ" ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನನ್ನ ವಿರುದ್ಧ ಸುಳ್ಳು ದೂರುಗಳನ್ನು ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಆರೋಪಗಳು ಸುಳ್ಳು ಎಂದು ಗೊತ್ತಾಗುತ್ತದೆ. ನಾನು ಎಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿಲ್ಲ, ನಾನು ಹಾಗೆ ಹೇಳಿದ್ದರೆ ತೋರಿಸಲಿ" ಎಂದು ಸವಾಲು ಹಾಕಿದರು.
"ನಾನು ಖಂಡ್ರೆ ಎನ್ನುವ ಬದಲಾಗಿ ಖರ್ಗೆ ಎಂದು ಬಾಯ್ತಪ್ಪಿ ಆಡಿದ ಮಾತನ್ನೇ ದೊಡ್ಡ ರಾಜಕೀಯಕ್ಕೆ ಬಳಸಿಕೊಂಡ ಘನಂದಾರಿ ಪಕ್ಷ ಇದು. ಇವರು ಎಷ್ಟು ದಲಿತ ವಿರೋಧಿಗಳೆಂದರೆ ಅವರ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಬೆಂಕಿ ಹಚ್ಚಿದರನ್ನು ಅಮಾಯಕರೆಂದು ಹೇಳುತ್ತಿದ್ದಾರೆ. ಎಸ್ಸಿ ಮತ್ತು ಎಸ್ಟಿಗೆ ಮೀಸಲಿಟ್ಟ 34 ಸಾವಿರ ಕೋಟಿ ಹಣದಲ್ಲಿ 17 ಸಾವಿರ ಕೋಟಿಯನ್ನು ಡೈವರ್ಟ್ ಮಾಡುತ್ತಿದ್ದಾರೆ. ಇದರಿಂದ ಇವರು ಎಷ್ಟು ದಲಿತರ ಪರವಾಗಿದ್ದಾರೆ ಎಂದು ಗೊತ್ತಾಗುತ್ತದೆ" ಎಂದು ಟೀಕಿಸಿದರು.
"ಸರ್ಕಾರ ಬಂದ ಎರಡೂವರೆ ತಿಂಗಳಲ್ಲೇ ಲಂಚಗುಳಿತನ ಹೆಚ್ಚಾಗಿದೆ. ಯಾರೇ ಸರ್ಕಾರಿ ಅಧಿಕಾರಿಯನ್ನು ಕೇಳಿದರೂ ನಾವು ಉಚಿತವಾಗಿ ವರ್ಗಾವಣೆಯಾಗಿ ಬಂದಿಲ್ಲ ಎಂದು ಹೇಳುವುದಿಲ್ಲ. ಸರ್ವೇ ವರ್ಗಾವಣೆ ನೋಡುತ್ತಿದ್ದೆ, ಒಂದು ಸ್ಥಳಕ್ಕೆ ಎರಡ್ಮೂರು ಜನರನ್ನು ಹಾಕಿದ್ದಾರೆ. ಇದರರ್ಥವೇನು ಎಂದು ಗೊತ್ತಾಗುತ್ತಿಲ್ಲ. ಒಟ್ಟಾರೆ ಗೊಂದಲ, ದುಡ್ಡಿಗಾಗಿ ಹಪಹಪಿ ಸರ್ಕಾರದಲ್ಲಿ ನಡೆಯುತ್ತಿದೆ" ಎಂದು ದೂರಿದರು.
ಕೃಷಿ ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ರಾಜಭವನಕ್ಕೆ ಹೋಗಿ ದೂರು ಕೊಟ್ಟಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದೆ. ಇಂಥ ಪ್ರಕರಣ ರಾಜ್ಯದ ಇತಿಹಾಸದಲ್ಲಿಯೇ ಮೊದಲು. ಇದು ಸಾಂಕೇತಿಕ ಮಾತ್ರ. ಇನ್ನೂ ಬೇರೆ ಬೇರೆ ಇಲಾಖೆ ಅಧಿಕಾರಿಗಳು ರಾಜಭವನಕ್ಕೆ ಹೋಗಲಿದ್ದಾರೆ. ಎಷ್ಟೆಷ್ಟು ವಸೂಲಾಗುತ್ತಿದೆ ಎಂದು ಹೊರಬರುತ್ತದೆ ಎಂದರು.
ಇದನ್ನೂ ಓದಿ: ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ