ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಅಪರಾಧಿ ಆದಿತ್ಯ ರಾವ್ ಮೇಲೆ ಶಿವಮೊಗ್ಗದ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಈತನನ್ನು ಮಂಗಳೂರು ಜೈಲಿನಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.
ಆದಿತ್ಯ ರಾವ್ ಜೂನ್ 1 ರಂದು ಕಾರಾಗೃಹದ ವಿಸಿ ಕೊಠಡಿಗೆ ಹೋಗಿ ತನ್ನ ವಿಚಾರಣೆ ಇದೆಯೇ ಎಂದು ಕೇಳಿದ್ದಾನೆ. ಇದಕ್ಕೆ ಜೈಲು ಸಿಬ್ಬಂದಿ ವಿಚಾರಣೆ ಇಲ್ಲ ಎಂದು ತಿಳಿಸಿದ್ದಾರೆ. ಸ್ವಲ್ಪ ಮುಂದೆ ಹೋಗಿ ವಾಪಸ್ ಬಂದು ಏಕಾಏಕಿ ವಿಸಿ ರೂಂಗೆ ನುಗ್ಗಿದ ಆರೋಪಿ ಅಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾನೆ. ಚೂಪಾದ ಕಲ್ಲು ಬಳಸಿ ಟಿವಿ ಧ್ವಂಸಗೊಳಿಸಿದ್ದಾನೆ ಎಂದು ದೂರು ದಾಖಲಾಗಿದೆ.
ತಕ್ಷಣ ಅಲ್ಲಿಯೇ ಇದ್ದ ಜೈಲು ಸಿಬ್ಬಂದಿ ದೀಪಾ ನಿಂಬೋಜಿ ಹಾಗೂ ಹೋಂ ಗಾರ್ಡ್ ಚಂದ್ರಪ್ಪ ಇಬ್ಬರು ಆದಿತ್ಯ ರಾವ್‌ನನ್ನು ಹಿಡಿದುಕೊಂಡು ಜೈಲರ್ ವಶಕ್ಕೆ ನೀಡಿದ್ದಾರೆ. ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಹಾಗೂ ಜೈಲಿನ ವಸ್ತುಗಳನ್ನು ಹಾನಿಗೊಳಿಸಿದ ಗಂಭೀರ ಆರೋಪದ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಡಾ.ಅನಿತ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Mangalore: ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆಹಚ್ಚಿದ್ದ 'ಲೀನಾ' ಇನ್ನಿಲ್ಲ
ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 2020 ರ ಜನವರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಈತ ಆತಂಕ ಸೃಷ್ಟಿಸಿದ್ದ. ಬಳಿಕ ಪತ್ತೆಯಾದ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಖಾಲಿ ಮೈದಾನದಲ್ಲಿ ಸ್ಫೋಟಗೊಳಿಸಿತ್ತು. ಅದಾದ ಬಳಿಕ ಆದಿತ್ಯ ರಾವ್ ಬೆಂಗಳೂರು ಡಿಜಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದ. ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು.
ಆರೋಪಿಗೆ 20 ವರ್ಷ ಜೈಲು ಶಿಕ್ಷೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ 4 ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಕಳೆದ ವರ್ಷ ಆದೇಶಿಸಿದೆ. ಆದಿತ್ಯ ರಾವ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತನಿಗೆ ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಅನ್ವಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ, ದಂಡ ತೆರಲು ವಿಫಲವಾದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ಎಂದು ತಿಳಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಸೆಕ್ಷನ್ 16ರ ಅನ್ವಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ, ದಂಡ ತೆರಲು ವಿಫಲವಾದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಜಿಲ್ಲಾ ನಾಲ್ಕನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ತೀರ್ಪು ವಿಧಿಸಿ ಕಳೆದ ವರ್ಷ ಆದೇಶಿಸಿದ್ದರು. ಅಪರಾಧಿ ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ.