ಶಿವಮೊಗ್ಗ : ಅಂಗನವಾಡಿ ಕಾರ್ಯಕರ್ತೆಯೊಬ್ಬರು ಗ್ರಾಮ ಪಂಚಾಯತ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಜಾಗ ತೆರವಿಗೆ ಹೋದ ಗ್ರಾಪಂ ಅಧ್ಯಕ್ಷರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ ಘಟನೆ ಹೊಸನಗರದ ಹೆದ್ದಾರಿ ಪುರ ಗ್ರಾಮದಲ್ಲಿ ನಡೆದಿದೆ.
ಹೊಸನಗರ ತಾಲೂಕು ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಳ್ಳಿ ಗ್ರಾಮದ ಸರ್ವೇ ನಂಬರ್ 11ರಲ್ಲಿ ಒಂದು ಎಕರೆ ಜಾಗವನ್ನು ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಜಾಗದಲ್ಲಿ ಅಡಿಕೆ, ತೆಂಗನ್ನು ಹಾಕಲಾಗಿದೆ.
ಈ ಜಾಗದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ತೀರ್ಮಾನ ಮಾಡಲಾಗಿತ್ತು. ಇದರಿಂದ ಜಾಗವನ್ನು ತೆರವು ಮಾಡುವಂತೆ ಗ್ರಾಮ ಪಂಚಾಯತ್ ಸದಸ್ಯರು ಅನೇಕ ಬಾರಿ ತಿಳಿಸಿದ್ದಾರೆ.
ಆದರೂ ಸಹ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಪಂಚಾಯತ್ ಅಧ್ಯಕ್ಷೆ ನವಿತಾ ಗಂಗಾಧರ್ ಅವರ ನೇತೃತ್ವದಲ್ಲಿ ಪಂಚಾಯತ್ ಸದಸ್ಯರನ್ನು ಒಳಗೊಂಡ ತಂಡ ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ ಅವರ ಬಳಿ ತೆರಳಿದೆ.
ಜಾಗ ತೆರವು ಮಾಡುವಂತೆ ತಿಳಿಸುತ್ತಿದ್ದಂತೆಯೇ, ಭೂ ಕಬಳಿಕೆ ಮಾಡಿರುವ ಗಾಯಿತ್ರಿ ಮನೆಯಲ್ಲಿನ ಕುಡಗೋಲು ತೆಗೆದುಕೊಂಡು ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಿತ್ರಿರವರಿಗೆ ಸಿಆರ್ಪಿಎಫ್ ಯೋಧ ಮಲ್ಲಿಕಾರ್ಜುನ್ ಸಾಥ್ ನೀಡಿ ಗ್ರಾಮ ಪಂಚಾಯತ್ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ.