ಶಿವಮೊಗ್ಗ: ಅಕ್ರಮವಾಗಿ ಕಸಾಯಿಖಾನೆ ನಿರ್ಮಿಸಿ ಹಸು, ಎಮ್ಮೆಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಕೇಂದ್ರದ ಮೇಲೆ ತುಂಗಾನಗರ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಸೊಳೆಬೈಲು ಬಡಾವಣೆಯಲ್ಲಿ ಅಬ್ದುಲ್ ಅಜೀಜ್ ಅಲಿಯಾಸ್ ಅಜೀಜ್ ಮತ್ತು ಅಬ್ದುಲ್ ಗಫಾರ್ ಅಲಿಯಾಸ್ ಅಬ್ದುಲ್ ಫಾರೂಕ್ರವರು ತಮ್ಮ ಮನೆಯ ಹಿಂಭಾಗದಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡು ಅದರಲ್ಲಿ ಅಕ್ರಮ ಕಸಾಯಿಖಾನೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ತುಂಗಾನಗರ ಪಿಐ ಮಂಜುನಾಥ್ರವರು ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದ್ದಾರೆ. ಈ ವೇಳೆ ವಧೆ ಮಾಡಿಟ್ಟಿದ್ದ 7 ಹಸುಗಳನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಅದೇ ಶೆಡ್ನ ಹಿಂಭಾಗದಲ್ಲಿ ಕಟ್ಟಿದ್ದ 9 ಕರುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಬಿಡಲಾಗಿದೆ. ಈ ಸಂಬಂಧ ಆರೋಪಿಗಳಿಬ್ಬರು ಪರಾರಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಹಣ್ಣು ಮಾರಾಟಗಾರನ ಬಳಿ ಎಂಟು ಜೀವಂತ ಬಾಂಬ್ಗಳು ಪತ್ತೆ.. ಬೆಚ್ಚಿ ಬಿದ್ದ ಜನ
ಪೊಲೀಸರು ದಾಳಿ ನಡೆಸಿದ ಬಳಿಕ ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಕ್ರಮ ಕಸಾಯಿಖಾನೆಯನ್ನು ತಪಾಸಣೆ ನಡೆಸಿ ಪಾಲಿಕೆಯ ಸಿಬ್ಬಂದಿ ನೆರವಿನಿಂದ ಅದನ್ನು ನೆಲಸಮ ಮಾಡಲಾಯಿತು. ಬಳಿಕ ಮಾತನಾಡಿದ ಮೇಯರ್, ಸೊಳೆಬೈಲಿನಲ್ಲಿ ಅಕ್ರಮ ಕಸಾಯಿಖಾನೆ ನಿರ್ಮಾಣ ಮಾಡಲಾಗಿರುವ ವಿಚಾರ ಪೊಲೀಸರ ದಾಳಿಯಿಂದಾಗಿ ತಿಳಿದು ಬಂದಿದೆ. ಇದು ಅಕ್ರಮ ಕಸಾಯಿಖಾನೆಯಾದ ಕಾರಣ ಪಾಲಿಕೆ ವತಿಯಿಂದ ಇದನ್ನು ನೆಲಸಮ ಮಾಡಲಾಗಿದೆ. ಮುಂದೆ ಈ ತರಹದ ಕಸಾಯಿಖಾನೆಗಳು ಕಂಡಲ್ಲಿ ನೆಲಸಮ ಮಾಡಲಾಗುವುದು ಎಂದು ತಿಳಿಸಿದರು.
ಗೋ ಹತ್ಯೆ ಮಾಡಿದ್ದಲ್ಲಿ 7 ವರ್ಷ ಜೈಲು: ರಾಜ್ಯ ಸರ್ಕಾರವು ಗೋವುಗಳ ರಕ್ಷಣೆಗಾಗಿ 'ಗೋ ಹತ್ಯೆ ನಿಷೇಧ ಕಾಯ್ದೆ'ಯನ್ನು ಜಾರಿಗೆ ತಂದಿದೆ. ಈ ಕಾಯ್ದೆ ಅಡಿ 3 ರಿಂದ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. 2021-22 ನೇ ಸಾಲಿನಲ್ಲಿ 31 ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. 2022-23 ನೇ ಸಾಲಿನ ಆಯವ್ಯಯದಲ್ಲಿ ಗೋಶಾಲೆಗಳನ್ನು 100ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಪ್ರತಿ ಜಿಲ್ಲೆಗಳಲ್ಲಿ 70 ಹೆಚ್ಚುವರಿ ಗೋ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಗೋ ಶಾಲೆಗಳು ಕಾರ್ಯಾರಂಭವಾಗಿವೆ. ಉಳಿದಂತೆ 24 ಜಿಲ್ಲೆಗಳ ಗೋಶಾಲೆ ನಿರ್ಮಾಣ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲೇ ಇದೆ.
ಈ ಮೊದಲು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 1964ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅವಧಿಯಲ್ಲಿ ಜಾರಿಯಾಗಿತ್ತು. ಆಗ ಕೇವಲ 1000 ರೂ. ದಂಡ ಮತ್ತು 6 ತಿಂಗಳು ಶಿಕ್ಷೆ ವಿಧಿಸಿಸಿತ್ತು. ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊವಾಗಿರಲಿಲ್ಲ.
ಇದನ್ನೂ ಓದಿ: 'ಆಕೆ ಕನಸಿನಲ್ಲಿ ಬಂದು ಕಾಡುತ್ತಿದ್ದಳು..': ನಿಗೂಢ ಕೊಲೆ ರಹಸ್ಯ ಪ್ರಕರಣ ಬೇಧಿಸಿದ ಪೊಲೀಸರು