ಶಿವಮೊಗ್ಗ: ಅಂಬೇಡ್ಕರ್ ಹೆಸರು ಹೇಳಿದ್ರೆ ನಮ್ಮ ನಾಲಿಗೆ ಶುದ್ಧಿಯಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ 130ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬರೆದ ಸಂವಿಧಾನವನ್ನು ವಿಶ್ವದ ವಿವಿಧ ಪ್ರಜಾಪ್ರಭುತ್ವ ರಾಷ್ಟ್ರಗಳು ಅನುಸರಿಸಿವೆ. ಮಾತಿನಲ್ಲಿ ಮೀಸಲಾತಿ ಸಿಗಲ್ಲ. ಅನೇಕ ವರ್ಷಗಳಿಂದ ಇದೇ ರೀತಿ ಹೋರಾಟ ನಡೆದುಕೊಂಡು ಬಂದಿದೆ. ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಮೀಸಲಾತಿ ಹೆಚ್ಚಿಸಬೇಕು ಅಂತ ಹೇಳಿದೆ. ಅದಕ್ಕೆ ನಮ್ಮ ಕ್ಯಾಬಿನೆಟ್ನಲ್ಲಿ ಮೀಸಲಾತಿ ಹೆಚ್ಚಿಸುವ ಕುರಿತು ಒಪ್ಪಿಗೆ ಸಿಕ್ಕಿದೆ. ಮೀಸಲಾತಿ ಕೆಲವರ ಕೈಯಲ್ಲಿಯೇ ಇದೆ. ಎಲ್ಲಾ ಅನುಭವಿಸಿದ್ರು ಸಹ ಅವರಿಗೆ ಮೀಸಲಾತಿ ಸಿಗುತ್ತಿದೆ. ಅದಕ್ಕೆ ಕಡು ಬಡವರಿಗೆ ಮೀಸಲಾತಿ ಸಿಗಬೇಕಿದೆ. ಸ್ವಾತಂತ್ರ್ಯ ಬಂದಾಗಿನಿಂದ ಮೀಸಲಾತಿ ಅನುಭವಿಸಿದವರೇ ಅನುಭವಿಸುತ್ತಿದ್ದಾರೆ.
ಅವರೇ ಮಂತ್ರಿಗಳು, ಅವರ ಮಕ್ಕಳೇ ಶಾಸಕರು, ಅವರ ಕಡೆಯವರು ಐಎಎಸ್ ಅಧಿಕಾರಿಗಳು ಆಗಿದ್ದಾರೆ. ನಮ್ಮಲ್ಲಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು ಆಗುತ್ತಿಲ್ಲ. ದಲಿತರ ಕಾಲೋನಿಯಲ್ಲಿ ಇನ್ನೂ ಪದವೀಧರರು ಸಿಗುತ್ತಿಲ್ಲ. ದಲಿತರಿಗೆ ಇನ್ನೂ ಮೀಸಲಾತಿ ಬೇಕು ಅಂತ ಹೇಳುತ್ತಿಲ್ಲ. ಇವತ್ತಲ್ಲ ನಾಳೆ ಮೇಲ್ಪದರು ಕಿತ್ತು ಬಡವರಿಗೆ ಮೀಸಲಾತಿ ಸಿಗುತ್ತದೆ. ಹಿಂದೂ ಸಮಾಜ ಇನ್ನೂ ಒಂದಾಗಿಲ್ಲ. ಅನೇಕ ಕಡೆ ಹೊರಗಿನವರಂತೆ ನೋಡಿಕೊಳ್ಳುತ್ತಾರೆ. ದೇವಸ್ಥಾನ, ಕೆರೆ, ಕಟ್ಟೆಗಳು ಯಾರಪ್ಪನ ಸ್ವತ್ತು ಅಲ್ಲ ಎಂದರು.