ಶಿವಮೊಗ್ಗ : ಮನೆಯ ಸದಸ್ಯರು ಮತಾಂತರ ಆಗುತ್ತಿದ್ದಾರೆ ಎಂದು ಸ್ಥಳೀಯರು ನಗರದ ಮನೆಯೊಂದರ ಮುಂದೆ ಜಮಾಯಿಸಿದ ಘಟನೆ ನಗರದಲ್ಲಿ ನಡೆದಿದೆ.
ಸಾಗರದ ಗೋಪಾಲಗೌಡ ನಗರದ 2ನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ಮನೆಯ ಸದಸ್ಯರು ಮತಾಂತರ ಆಗುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮನೆಯವರಲ್ಲಿ ಓರ್ವರಿಗೆ ಇತ್ತೀಚಿಗೆ ಅನಾರೋಗ್ಯ ಉಂಟಾಗಿತ್ತು. ಅವರು ಸಾಕಷ್ಟು ವೈದ್ಯರ ಬಳಿ ತೋರಿಸಿದ್ದರು. ಆದರೂ, ಗುಣಮುಖರಾಗಿರಲಿಲ್ಲ. ಹೀಗಾಗಿ, ಪೂಜೆ ನಡೆಸಿದ್ದಾರೆ. ಈ ವೇಳೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅವರ ಮನೆ ಬಳಿ ಸ್ಥಳೀಯರೊಂದಿಗೆ ಜಮಾಯಿಸಿದ್ದರು.
ಇದಕ್ಕೆ ಮನೆಯವರು ನಾವು ಕೇವಲ ಮರಿಯಾ ದೇವತೆಯ ಪೂಜೆ ನಡೆಸಿದ್ವಿ ಅಷ್ಟೇ ಎಂದಿದ್ದಾರೆ. ಇದಕ್ಕೆ ಸಾಗರದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪರಶುರಾಮ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮತಾಂತರ ಹಾವಳಿ ಹೆಚ್ಚಾಗುತ್ತಿದೆ. ನಾವುಗಳು ಮಂಗಳೂರು ಹಾಗೂ ಬೆಂಗಳೂರುಗಳಲ್ಲಿ ಮತಾಂತರ ಆಗುತ್ತಿದೆ ಎಂದು ಕೇಳುತ್ತಿದ್ದೇವೆ. ಆದರೆ, ಸ್ವತಃ ನಮ್ಮ ಏರಿಯಾದಲ್ಲಿ ಮತಾಂತರ ಆಗುತ್ತಿರುವುದು ದುರಾದೃಷ್ಟಕರ. ಸರ್ಕಾರ ಹಾಗೂ ಸ್ಥಳೀಯ ನಗರ ಆಡಳಿತ ಇದರ ಬಗ್ಗೆ ಗಮನಹರಿಸಿ ಮತಾಂತರಕ್ಕೆ ಯತ್ನಿಸಿದ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಓದಿ: ನಗು-ಮಗು ವಾಹನ ಇಲ್ಲದೆ ಬಾಣಂತಿಯರು ಪರದಾಟ.. ಜಿಮ್ಸ್ ಅಧಿಕಾರಿಗಳ ವಿರುದ್ಧ ಬೇಜವಾಬ್ದಾರಿ ಆರೋಪ