ಶಿವಮೊಗ್ಗ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ವಿರುದ್ದ ಮರ ಕಟಾವು ಮಾಡಿದ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ತಾಲೂಕಿನ ಹನಸವಾಡಿಯಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಈ ಶಾಲೆಯ ಆವರಣದಲ್ಲಿ ತೇಗ ಸೇರಿದಂತೆ ಇತರ ಮರಗಳಿವೆ.
ಆದರೆ, ಇಲ್ಲಿನ ತೇಗ, ಆಲದ ಮರಗಳನ್ನು ಅಕ್ರಮವಾಗಿ ಶಾಲೆಯ ಪ್ರಾಂಶುಪಾಲರಾದ ಭಕ್ತ ಪ್ರಹ್ಲಾದ್ ಅವರು ಕಟಾವು ಮಾಡಿಸಿದ್ದಾರೆ ಎಂದು ಶಾಲೆಯ ಆವರಣದಲ್ಲಿಯೇ ಇರುವ ಪಿಯು ಕಾಲೇಜಿನಿಂದ ಚಿಕ್ಕೋಡಿಗೆ ವರ್ಗಾವಣೆಯಾದ ಭೋಜರಾಜ್ ಆರೋಪಿಸಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಶಾಲೆಯ ದೈಹಿಕ ಶಿಕ್ಷಕರಾದ ಹನುಮಂತಪ್ಪ ಸಹ ಮರ ಕಟಾವು ಮಾಡಿದ್ದು ಹೌದು ಎಂದು ತಿಳಿಸಿದ್ದಾರೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿದ ಶಾಲೆಯ ಪ್ರಾಂಶುಪಾಲರಾದ ಭಕ್ತ ಪ್ರಹ್ಲಾದ್ ಅವರು, ಶಾಲೆಯ ಆವರಣದಲ್ಲಿ ಒಣಗಿದ್ದ ಮರಗಳನ್ನು ಕಟಾವು ಮಾಡಲಾಗಿದೆ. ಅಲ್ಲದೇ, ವಿದ್ಯುತ್ ತಂತಿ ಹಾಯ್ದು ಹೋಗುವ ತಂತಿಗಳ ಕೆಳಗೆ ಇದ್ದ ಒಂದು ಮರವನ್ನು ಕಡಿಯಲಾಗಿದೆ.
ಈ ಮರಗಳನ್ನು ಕಳೆದ ಒಂದು ವರ್ಷದ ಹಿಂದೆಯೇ ಕಟಾವು ಮಾಡಲಾಗಿದೆ. ಅಲ್ಲದೆ, ಇನ್ನೊಂದು ಮರದ ಮೇಲ್ಭಾಗದ ಅರ್ಧ ಕಟ್ ಮಾಡಲಾಗಿದೆ. ಅಲ್ಲದೇ, ಪೂರ್ಣ ಕಟ್ ಮಾಡಿದ ಮರವನ್ನು ಮಾರಾಟ ಮಾಡಿ ಸರ್ಕಾರಕ್ಕೆ ಹಣ ಕಟ್ಟಲಾಗಿದೆ ಎಂದು ಸ್ಪಷ್ಟನೆ ಸಹ ನೀಡಿದ್ದಾರೆ.
ಶಾಲೆಯಲ್ಲಿ ಶಿಕ್ಷಕರ ನಡುವೆ ರಾಜಕೀಯ
ಭಕ್ತ ಪ್ರಹ್ಲಾದ್ ಅವರು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಆದರೆ, ಆರೋಪ ಮಾಡುತ್ತಿರುವ ಭೋಜರಾಜ್ ಪಿಯು ಕಾಲೇಜ್ನ ಉಪನ್ಯಾಸಕರು. ಭೋಜರಾಜ್ ಅವರು ಶಾಲೆಯ ಹಾಸ್ಟೆಲ್ನ ಚಾರ್ಜ್ ಅನ್ನು ಶಾಲೆಯ ದೈಹಿಕ ಶಿಕ್ಷಕರಾದ ಹನುಮಂತಪ್ಪ ಅವರಿಗೆ ಕೊಡಿಸಲು ಸ್ಥಳೀಯ ಪುಡಾರಿ ಜೊತೆ ಯಶಸ್ವಿಯಾಗಿದ್ದರು.
ಆದರೆ, ಹನುಮಂತಪ್ಪ ಅವರು ಹಾಸ್ಟೆಲ್ ನಿರ್ವಹಿಸಲು ಆಗದೇ ಪುನಃ ಭಕ್ತ ಪ್ರಹ್ಲಾದ್ ಅವರಿಗೆ ವಾಪಸ್ ನೀಡಿದ್ದಾರೆ. ಅಲ್ಲದೇ, ಭೋಜರಾಜ್ ವರ್ಗಾವಣೆಗೆ ಪ್ರಾಂಶುಪಾಲ ಭಕ್ತ ಪ್ರಹ್ಲಾದ್ ಕಾರಣ ಎಂದು ಪಿತೂರಿ ನಡೆಸುತ್ತಿದ್ದಾರೆ. ಮರ ಕಟಾವು ಮಾಡಿದಾಗ ಸುಮ್ಮನಿದ್ದ ಭೋಜರಾಜ್ ವರ್ಗಾವಣೆಗೊಂಡ ನಂತರ ಆರೋಪ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.