ಶಿವಮೊಗ್ಗ: ಕೊರೊನಾ ವೈರಸ್ ಹರಡದಂತೆ ತಡೆಯಲು ಜಿಲ್ಲಾಡಳಿತ ಸಾಕಷ್ಟು ಶ್ರಮ ಹಾಕಿ, ಎಲ್ಲ ಅಧಿಕಾರಿಗಳು ಮತ್ತು ಇಲಾಖೆ ಸಹಕಾರದಿಂದ ಅದನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಅದೇ ರೀತಿ ರಾಜ್ಯದಲ್ಲೂ ಹರಡದಂತೆ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳಲು ಮಹಾನಗರ ಪಾಲಿಕೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕೊರೊನಾ ವೈರಸ್ ಹರಡುವ ಎರಡನೇ ಸ್ಟೇಜ್ನಲ್ಲಿ ನಾವಿದ್ದೇವೆ. ಇದು ಹರಡದಂತೆ ನೋಡಿಕೊಳ್ಳಲು ಎಲ್ಲಾ ರೂಪದಲ್ಲೂ ಪ್ರಯತ್ನಗಳನ್ನು ಸಹ ರಾಜ್ಯ ಸರ್ಕಾರ ಮಾಡುತ್ತಿದೆ. ವಿಶೇಷವಾಗಿ ಮೋದಿರವರು ಜನತಾ ಕರ್ಫ್ಯೂವನ್ನು ಯೋಚನೆ ಮಾಡಿದ್ದಾರೆ. ಎಲ್ಲಾ ಬಿಜೆಪಿಯ ಜನ ಪ್ರತಿನಿಧಿಗಳು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ತನಕ ಮನೆಯಿಂದ ಕದಲಬಾರದು ಎಂದು ರಾಷ್ಟ್ರೀಯ ನಾಯಕರುಗಳ ಮೂಲಕ ನಮಗೆ ಆದೇಶ ಹೊರಡಿಸಿದ್ದಾರೆ.
ಸಂಜೆ ಮನೆಯಿಂದ ಹೊರಬಂದು ಸಮಾಜದಲ್ಲಿ ಸೇವೆ ಸಲ್ಲಿಸಿದವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಇದು ಜನ ಜಾಗೃತಿಯ ಮೂಲಕವೇ ಆಗಬೇಕಾದ ಕಾರಣ ಕೊರೊನಾ ವೈರಸ್ ದೇಶ ಬಿಟ್ಟು ಹೋಗುವಂತೆ ಮಾಡಬೇಕಿದೆ ಎಂದು ಈಶ್ವರಪ್ಪ ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ನಮಗೆ ಪರೀಕ್ಷೆಗೆ ಲ್ಯಾಬ್ ಕಿಟ್ ಇದೆ. ಇಂದು ಪರೀಕ್ಷೆ ನಡೆಸಿದ ಎಲ್ಲವೂ ನೆಗಟಿವ್ ಬಂದಿವೆ. ಅಕಸ್ಮಾತ್ ಜಾಸ್ತಿಯಾದರೆ ಖಾಸಗಿ ಆಸ್ಪತ್ರೆಯ ಲ್ಯಾಬ್ ಬಳಸಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನ ತೆಗದುಕೊಂಡಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್, ಪಾಲಿಕೆ ಆಯುಕ್ತ ಚಿದಾನಂದ ವಾಟರೆ, ಡಿಹೆಚ್ಒ ರಾಜೇಶ್ ಸುರಗಿಹಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.