ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ವೀಕ್ಷಣೆ ಮಾಡಿದರು.
ಕಳೆದ ತಿಂಗಳು ಆನ್ಲೈನ್ ಮೂಲಕ ಸಿಎಂ ಯಡಿಯೂರಪ್ಪನವರು ವಿಮಾನ ನಿಲ್ದಾಣದ ಮುಂದುವರೆದ ಕಾಮಗಾರಿಗೆ ಚಾಲನೆ ನೀಡಿದ್ದರು. ನಂತರ ಕಾಮಗಾರಿ ಚುರುಕುಗೊಂಡಿತ್ತು. ಹಿಂದೆ 2009 ರಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಮಧ್ಯದಲ್ಲಿ ಕಾಮಗಾರಿ ನಡೆಸದೇ ಗುತ್ತಿಗೆದಾರ ವಾಪಸ್ ಆಗಿದ್ದರು. ಇದರಿಂದ ಯಡಿಯೂರಪ್ಪನವರು ಸಿಎಂ ಆದ ಮೇಲೆ ಕಾಮಗಾರಿ ಚುರುಕುಗೊಂಡಿದೆ.
ಈಗಾಗಲೇ ರನ್ ವೇ ಕಾಮಗಾರಿ ಭರದಿಂದ ನಡೆಯುತ್ತಿದೆ. ಇನ್ನುಳಿದ ಕಾಮಗಾರಿಗಳ ಬಗ್ಗೆ ಸಂಸದರು ಇಂದು ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ಬೇಗ ಹಾಗೂ ಗುಣಮಟ್ಟದಿಂದ ನಿರ್ಮಿಸುವಂತೆ ಸೂಚನೆ ನೀಡಿದರು. ಈ ವೇಳೆ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಾಂತರಾಜ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಂಪತ್ ಸೇರಿದಂತೆ ಗುತ್ತಿಗೆದಾರರು ಹಾಜರಿದ್ದರು.
ಕೇಂದ್ರ ಕಾರಾಗೃಹಕ್ಕೆ ಭೇಟಿ, ಶ್ಲಾಘನೆ :
ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಣೆಯ ನಂತರ ಪಕ್ಕದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು. ಕಾರಾಗೃಹದ ಒಳಗೆ ಹೋದ ಸಂಸದರು, ಇಲ್ಲಿನ ಕೈದಿಗಳಿಂದಲೇ ನಿರ್ಮಾಣವಾಗುತ್ತಿರುವ ವಿವಿಧ ವಸ್ತುಗಳನ್ನು ವೀಕ್ಷಣೆ ಮಾಡಿದರು. ಇಲ್ಲಿ ಅಗರ್ ಬತ್ತಿ, ಶರ್ಟ್ ಹಾಗೂ ಮ್ಯಾಟ್ ತಯಾರಿಕೆಯನ್ನು ವೀಕ್ಷಿಸಿದರು. ನಂತರ ಕೈದಿಗಳೇ ರಚನೆ ಮಾಡಿರುವ ಪೆನ್ಸಿಲ್ನಿಂದ ರಚನೆ ಮಾಡಿದ ಭಾವಚಿತ್ರಗಳನ್ನು ನೋಡಿದರು. ಈ ವೇಳೆ ಕೇಂದ್ರ ಕಾರಾಗೃಹದ ಹಿರಿಯ ಅಧಿಕಾರಿಗಳು ಸೇರಿದಂತೆ ಜೈಲಿನ ಸಿಬ್ಬಂದಿ ಹಾಜರಿದ್ದರು.