ಶಿವಮೊಗ್ಗ: ಅಶ್ವತ್ಥ ನಾರಾಯಣ್ ಅವರು ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಬೇಕೆಂದು ಹೇಳಿದ್ದರು. ಈಗ ಒಂದು ಸ್ಥಳ ನಿಗದಿ ಮಾಡಿ. ನಾನು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಕರೆದುಕೊಂಡು ಬರ್ತೆನೆ. ಜೊತೆಗೆ ಪತ್ರಕರ್ತರನ್ನು ಕರೆದುಕೊಂಡು ಬರ್ತೇನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ನಾವೇ ಇಬ್ಬರನ್ನು ಕರೆ ತರುತ್ತೇವೆ ಎಂದರು. ಇಬ್ಬರನ್ನು ಕೊಂದ ನಂತರ ನಮ್ಮ ಪಕ್ಷದ ಎದೆಗಳು ತಯಾರಾಗಿರುತ್ತವೆ. ನಮ್ಮ ಎದೆ ಕಡಿಮೆ ಆಗಲ್ಲ, ನಿಮ್ಮ ಗುಂಡು ಕಡಿಮೆಯಾಗಬಹುದು ಎಂದರು.
ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ - ಸುರ್ಜೇವಾಲಾ: ಬಿಜೆಪಿಯವರಿಗೆ ಸೋಲು ಕಣ್ಣ ಮುಂದೆ ಇದೆ. ಇದರಿಂದ ಅವರು ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಗ್ಯಾರಂಟಿ ಕಾರ್ಡ್ ನೀಡುತ್ತಿರುವುದರಿಂದ ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ. ಹವಾಯಿ ಚಪ್ಪಲಿ ಹಾಕಿಕೊಳ್ಳುವವನು ಸಹ ವಿಮಾನದಲ್ಲಿ ಹಾರಾಟ ಮಾಡಬೇಕೆಂದು ಹೇಳಿದ್ರೂ ಸಹ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ರೆ ಆತ ಎಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಾನೆ ಎಂದು ಪ್ರಶ್ನಿಸಿದರು. ನಮ್ಮ ಗ್ಯಾರಂಟಿ ಪ್ರತಿ ಮಹಿಳೆಗೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ನಾವು ನಮಗಾಗಿ ಜೀವಿಸುತ್ತಿದ್ದೇವೆ. ಮುಂದಿನ ಚುನಾವಣೆಗಾಗಿ ಮುಂದಿನ 50 ದಿನ ಮುಡುಪಾಗಿಡಿ ಎಂದು ಮುಖಂಡರಿಗೆ ವಿನಂತಿಸಿಕೊಂಡರು. ಪ್ರತಿ ಮನೆ ಮನೆಗೆ ಹೋಗಿ ನಮ್ಮ ಗ್ಯಾರಂಟಿ ಕಾರ್ಡ್ ನೀಡಿ ಎಂದರು. ಇದರಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಸಹಿ ಇದೆ. ಗ್ಯಾರಂಟಿ ಕಾರ್ಡ್ ಯಾರ ಬಳಿ ಇರುತ್ತದೆಯೋ ಅವರಿಗೆ ನಮ್ಮ ಸರ್ಕಾರ ಬಂದಾಗ ವಿದ್ಯುತ್, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ನೀಡಲಾಗುವುದು. ನಂತರ ಡಿಸಿ ಅವರು ನಂಬರ್ಗೆ ಪೋನ್ ಮಾಡಿ ನಿಮಗೆ ಹಣ ನೀಡುತ್ತಾರೆ ಎಂದರು.
ಉಚಿತ ವಿದ್ಯುತ್ ನೀಡಲಾಗುವುದು: ವಿದ್ಯುತ್ ಇಲಾಖೆ ಅವರು ಪೋನ್ ಮಾಡಿ ನಿಮ್ಮ ಮೀಟರ್ ನಂಬರ್ ನೀಡಿದ್ರೆ ಉಚಿತ ವಿದ್ಯುತ್ ನೀಡಲಾಗುವುದು. ನಂತರ ಪಡಿತರ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆ ನೀಡಲಾಗುವುದು ಎಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.
ನಾಳೆಯಿಂದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಮನೆ ಮನೆಗೆ ಹೋಗಿ ಕಾರ್ಡ್ ವಿತರಣೆ ಮಾಡಲಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ನಮಗೆ ಶುಭವಾಗಿದ್ದಾರೆ. ಅವರು ಎರಡು ಮನೆಗೆ ಹೋಗಿ ಕಾರ್ಡ್ ಹಂಚಿ ಬನ್ನಿ ಎಂದರು. ಬಜೆಟ್ ನಲ್ಲಿ ಶೇ 40 ಹಣವನ್ನು ತಿನ್ನುತ್ತಿದ್ದಾರೆ. ನಮ್ಮ ಯೋಜನೆಗೆ ನೀಡಿದ್ರು ಸಹ ಇನ್ನೂ ಅವರು ತಿಂದ ಹಣ ಉಳಿಯುತ್ತದೆ. ನಮ್ಮ ಮಂತ್ರಿಗಳು ಲಂಚ ಪಡೆದುಕೊಂಡರೆ ಅವರನ್ನು ಅಂದೇ ವಜಾ ಮಾಡಲಾಗುವುದು ಎಂದರು. ಜನರ ಹಣ ಜನಕ್ಕೆ ಹೋಗುವುದು, ಭ್ರಷ್ಟಚಾರ ಅಂತ್ಯಗೊಳಿಸಿ, ಅಭಿವೃದ್ದಿ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಇದಕ್ಕೂ ಮುನ್ನಾ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ ಸುರ್ಜೇವಾಲ ಅವರು ನೇರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪೋನ್ ಮಾಡಿ ಗ್ಯಾರಂಟಿ ಕಾರ್ಡ್ ಹಂಚುವುದರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ನ ವೈಖರಿಯಾಗಿದೆ ಎಂದರು. ಕಾರ್ಡ್ ಅನ್ನು ಪ್ರತಿ ಬೂತ್ ಮಟ್ಟದಲ್ಲಿ ಹಂಚಬೇಕಿದೆ. ಬಿಜೆಪಿ ಅವರು ಸುಳ್ಳಿನ ವಾಟ್ಸ್ಆ್ಯಪ್ ಯೂನಿರ್ವಸಿಟಿಯಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಅತಿ ಹೆಚ್ಚು 144 ಸೆಕ್ಷನ್ ಕಂಡ ಜಿಲ್ಲೆ ಅಂದ್ರು ಅದು ಶಿವಮೊಗ್ಗ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರ ಗೆಲ್ಲುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಕ್ಷವನ್ನು ಅಧಿಕಾರಕ್ಕೆ ತರಲು ನಮ್ಮ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಇದರಿಂದ ನಮ್ಮ ಪಕ್ಷದ ಮುಖಂಡರು ಸಹ ಪಕ್ಷಕ್ಕಾಗಿ ದುಡಿಯಬೇಕಾಗಿದೆ. ನಮ್ಮ ನಮ್ಮ ಕ್ಷೇತ್ರದಲ್ಲಿ ಚುನಾವಣೆಯನ್ನು ಗೆಲ್ಲಿಸುವುದು ನಿಮ್ಮ ಕೈಯಲ್ಲಿ ಇದೆ ಎಂದು ಮುಖಂಡರಿಗೆ ತಿಳಿಸಿದರು.
ಬಿಜೆಪಿ ಭ್ರಷ್ಟಾಚಾರ ಸರ್ಕಾರವಾಗಿದೆ. ವಿರೂಪಾಕ್ಷಪ್ಪ ಕೋಟ್ಯಾಂತರ ರೂ ಲಂಚ ಹೊಡೆದವನಿಗೆ ಸರ್ಕಾರ ಬೇಲ್ ಸಿಗುವ ತನಕ ರಕ್ಷಣೆ ನೀಡಿದೆ. ಸ್ಮಾರ್ಟ್ ಸಿಟಿಯಲ್ಲಿ ಈಶ್ವರಪ್ಪ ಲೂಟಿ ಹೊಡೆದಿದ್ದಾರೆ. ಮೋದಿ ಅವರು ಅಚ್ಚೆ ದಿನ್ ಅಂತಾರೆ. ಆದರೆ ನಮಗೆಲ್ಲಾ ಕಚ್ ದಿನ್ ಆಗಿದೆ ಎಂದರು. ಜಿಲ್ಲೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಒಂದು ಸೀಟ್ ಗೆದ್ದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರನ್ನು ಒಂದೇ ಸೀಟು ಗೆಲ್ಲುವಂತೆ ಮಾಡಬೇಕು ಎಂದರು.
ಬಿಜೆಪಿ ಪಕ್ಷವು ಭ್ರಷ್ಟಾಚಾರದಿಂದ ಮುಳುಗುತ್ತಿದೆ : ಬಿಜೆಪಿ ಮುಳುಗುತ್ತಿರುವ ಹಡಗು ಆಗಿದೆ. ಇದರಿಂದ ಅವರ ಪಕ್ಷದ ಎಂಎಲ್ಸಿ ಪುಟ್ಟಣ್ಣ ಸೇರಿದಂತೆ ಇತರೆ ಮಾಜಿ ಶಾಸಕರುಗಳು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷವು ಭ್ರಷ್ಟಾಚಾರದಿಂದ ಮುಳುಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಬಗ್ಗೆ ಆಗಲಿ, 40 ಪರ್ಸೆಂಟ್ ಬಗ್ಗೆ ಆಗಲಿ ಉತ್ತರ ನೀಡುತ್ತಿಲ್ಲ. ಅವರು ವಿರೂಪಾಕ್ಷಪ್ಪನವರ, ಅದಾನಿ, ಗುತ್ತಿಗೆದಾರರ ಸಂಘದ ಆರೋಪ, ಖಾಸಗಿ ಶಾಲೆ ಒಕ್ಕೂಟದವರ ಆರೋಪದ ಬಗ್ಗೆ ಮಾತನಾಡಲ್ಲ. ಈಗ ಬಿಜೆಪಿಗೆ ಜನರ ಬಳಿ ಹೋಗಲು ಯಾವುದೇ ಮುಖವಿಲ್ಲ. ಚುನಾವಣೆಯ ವಿಷಯವಿಲ್ಲ. ಅವರ ಪಕ್ಷ ಸಂಪೂರ್ಣ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ ಎಂದರು.
ಬಿಜೆಪಿಯು ಎರಡು ಕೈಗಳಲ್ಲಿಯೂ ಬಾಚಿಕೊಳ್ಳಲು ತಲ್ಲೀನರಾಗಿದ್ದಾರೆ. ಬಿಜೆಪಿಯವರು ಮಠಕ್ಕೆ ನೀಡಿದ ಅನುದಾನ ಸೇರಿದಂತೆ ಎಲ್ಲರಲ್ಲೂ ಸಹ ಲಂಚ ಪಡೆಯುತ್ತಿದ್ದಾರೆ. ಮಂಗಳೂರು ಉಲ್ಲಾಳ ಹಾಗೂ ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಕೊಂಡಿದ್ದಾರೆ. ಆದರೆ ಆಸ್ಪತ್ರೆಗೆ ಜಾಗವೇ ಇಲ್ಲ. ಇವರು ಹಾರಾಡುವ ಆಸ್ಪತ್ರೆ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು. ಹಾರಾಡುವ ಆಸ್ಪತ್ರೆಯನ್ನು ಮೋದಿ ಅವರು ಉದ್ಘಾಟನೆ ಮಾಡಬಹುದೆನೋ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ಶಾಸಕ ಮಾಡಾಳ್ ಪುತ್ರನ ವಿರುದ್ಧ ಮತ್ತೆರಡು ಎಫ್ಐಆರ್ ದಾಖಲಿಸಿದ ಲೋಕಾಯುಕ್ತ..!