ಶಿವಮೊಗ್ಗ: ಜನರೆಲ್ಲರೂ ಸೇರಿ ಗ್ರಾಮದ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಎರಡು ಕೆರೆಗಳನ್ನು ಜನರೆಲ್ಲರೂ ಸೇರಿ ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿನ ಕೆರೆಗಳಲ್ಲಿ ಹೂಳು ತುಂಬಿ ನೀರು ನಿಲ್ಲದೆ ಕೃಷಿ ಮಾಡಲು ಅನಾನುಕೂಲ ಉಂಟಾಗಿತ್ತು. ಮೂಲೆಗದ್ದೆ ಮಠದ ಸ್ವಾಮೀಜಿಗಳು, ಸಾರಾ ಸಂಸ್ಥೆ ಹಾಗೂ ಸ್ವಗ್ರಾಮ ಯೋಜನೆ ಇವರುಗಳು ಕೈ ಜೋಡಿಸಿ ಗ್ರಾಮಸ್ಥರ ನೆರವಿಗೆ ನಿಂತು ಕೆರೆಯನ್ನು ಕಳೆದ ವರ್ಷ ಅಭಿವೃದ್ಧಿ ಪಡಿಸಿದ್ದರು.
ಇದರಿಂದ ಕೆರೆಗಳಲ್ಲಿ ನೀರು ನಿಂತಿದೆ. ಕೆರೆ ತುಂಬಿದ ಕಾರಣ ಗ್ರಾಮಸ್ಥರು ಕೆಲಸಕ್ಕಾಗಿ ವಲಸೆ ಹೋಗುವುದನ್ನು ಬಿಟ್ಟು ತಮ್ಮ ಗ್ರಾಮದಲ್ಲಿಯೇ ಕೃಷಿಯತ್ತ ಮುಖ ಮಾಡಿದ್ದಾರೆ. ಕೆರೆ ಅಭಿವೃದ್ಧಿಯ ಬಗ್ಗೆ ತಮ್ಮ ಸ್ನೇಹಿತರಿಂದ ತಿಳಿದ ನಟ ನೀನಾಸಂ ಸತೀಶ್ ಮುತ್ತಲ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುತ್ತಲ ಗ್ರಾಮಸ್ಥರು ಮಾಡಿರುವ ಒಳ್ಳೆಯ ಕಾರ್ಯವನ್ನು ಬೇರೆ ಗ್ರಾಮದವರು ಅನುಸರಿಸಬೇಕು ಎಂದು ನೀನಾಸಂ ಕರೆ ನೀಡಿದರು.
ಈ ವೇಳೆ ನೀನಾಸಂ ಅವರ ನಿರ್ದೇಶಕ ಗಣೇಶ್, ಗುರುಮೂರ್ತಿ, ಸತೀಶ್ ಹಂಜಾ, ರಮೇಶ್, ನಟ ಏಸು ಪ್ರಕಾಶ್ ಸೇರಿ ಗ್ರಾಮಸ್ಥರು ಹಾಜರಿದ್ಧರು.