ಶಿವಮೊಗ್ಗ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ನೀಡಲಾಗಿದೆ ಎಂದರು.
ಬಂಧಿಖಾನೆಗಳಲ್ಲಿ ವಿಡಿಯೋ ವೈರಲ್ ಕುರಿತು ಮಾತನಾಡಿದ ಅವರು, ಈ ಬಗ್ಗೆ ಪೊಲೀಸ್ ಇಲಾಖೆ ಬಂಧಿಖಾನೆ ಜಂಟಿಯಾಗಿ ಕ್ರಮಕೈಗೊಳ್ಳಲಿದೆ. ಶಿವಮೊಗ್ಗದ ಬಂಧಿಖಾನೆ ಮೇಲೆ ಸಹ ನಿಗಾ ಇಡಲು ತಿಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಜಾಗೃತಿ: ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಯುವಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅವರಿಗೆ ಆಗಬಹುದಾದ ನಷ್ಟಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
2017ರ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅನುಷ್ಠಾನ: 2017ರ ಪಬ್ಲಿಕ್ ಸೇಫ್ಟಿ ಆ್ಯಕ್ಟ್(ಸಾರ್ವಜನಿಕ ಸುರಕ್ಷತಾ ಕಾಯ್ದೆ)ಅನ್ನು ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುವುದು. ಮಾಲ್ಗಳು, ದೊಡ್ಡ ಹೋಟೆಲ್ಗಳಲ್ಲಿ ಸೆಕ್ಯೂರಿಟಿ ನೇಮಿಸುವುದು ಸೇರಿದಂತೆ ತಪಾಸಣೆ, ಸಿಸಿಟಿವಿ, ಬ್ಯಾಗ್ ಸ್ಕ್ಯಾನರ್ಗಳನ್ನು ಈ ತಿಂಗಳ ಅಂತ್ಯದ ಒಳಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೇಶ ರವಾನಿಸಿದರು.
ಇದನ್ನೂ ಓದಿ: ವಿಡಿಯೋ: 'ಅಶ್ವಮೇಧ' ಚಿತ್ರದ ಹಾಡು ಹೇಳಿ ಸ್ಟೇಜ್ ಮೇಲೆ ಧೂಳ್ ಎಬ್ಬಿಸಿದ ಶಾಸಕ ಎಸ್. ಕುಮಾರ್ ಬಂಗಾರಪ್ಪ