ಶಿವಮೊಗ್ಗ : ಹೈದರಾಬಾದ್‌ನಲ್ಲಿ ಪಶುವೈದ್ಯಾಧಿಕಾರಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನ ಕೊಲ್ಲಾಪುರದ ಸರ್ಕಾರಿ ಪಶುವೈದ್ಯೆ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಜೀವಂತ ಸುಟ್ಟು ಹಾಕಿರುವುದು ರಕ್ಕಸ ಕೃತ್ಯ. ರಾಜಸ್ತಾನದ ಜೈಪುರದ 15 ವರ್ಷದ ಬಾಲಕಿ ಮೇಲೆಯೂ ಅತ್ಯಾಚಾರ ನಡೆದಿದೆ. ಇತ್ತೀಚೆಗೆ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಮಹಿಳಾ ಸುರಕ್ಷತೆ ಮುಖ್ಯವಾಗಿದೆ ಹಾಗೂ ಇಂತಹ ಕಾಮಾಂಧರಿಗೆ ಕಠಿಣ ಶಿಕ್ಷೆಯಾಗಬೇಕು ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತೆಲಂಗಾಣ ಸರ್ಕಾರ ನೀಚ ಕೃತ್ಯ ತಡೆಯಲು ವಿಫಲವಾಗಿದೆ. ಮಹಿಳೆಯರಲ್ಲಿ ಅಸುರಕ್ಷತೆ ಭಾವ ಕಾಡುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ನ್ಯಾಯಾಲಯ ರಚಿಸಬೇಕು. ಕಾನೂನು ಸುವ್ಯವಸ್ಥೆ ಮತ್ತಷ್ಟು ಬಿಗಿಯಾಗಬೇಕು, ಮಹಿಳಾ ಭದ್ರತೆ ಕಾಪಾಡುವಲ್ಲಿ ವಿಶೇಷ ಮಹಿಳಾ ಭದ್ರತಾ ತಂಡ ರಚಿಸಬೇಕು. ಪಶುವೈದ್ಯಾಧಿಕಾರಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.