ಶಿವಮೊಗ್ಗ: ಮಹಿಳೆಯ ನಿಸ್ವಾರ್ಥ ಸೇವೆಯನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ. ಅಪೇಕ್ಷೆಯಿಲ್ಲದ ಕೆಲಸಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ ಎಂದು ಅದಮ್ಯ ಚೇತನದ ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಮಾರಿಕಾಂಬ ಮೈಕ್ರೋ ಫೈನಾನ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ತನ್ನನ್ನು ತಾನು ಹೌಸ್ ವೈಫ್ ಎಂದು ಕರೆದುಕೊಳ್ಳಬಾರದು. ದಯವಿಟ್ಟು ಈ ಪದವನ್ನು ಇಂದಿನಿಂದಲೇ ತೆಗೆದುಬಿಡಿ. ಮಹಿಳೆ ಮನೆ ಕೆಲಸಕ್ಕಾಗಿ ಸೀಮಿತವಾಗಿರುವುದಿಲ್ಲ ಮತ್ತು ಮಹಿಳೆ ಮನೆಯಲ್ಲಿ ಮಾಡುವ ಕೆಲಸಕ್ಕೆ ಲೆಕ್ಕ ಹಾಕಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಆಗಿದ್ದರೆ ಈ ದೇಶದ ಜಿಡಿಪಿ ಇಂದು ಅತಿ ಎತ್ತರಕ್ಕೆ ಹೋಗಬೇಕಾಗಿತ್ತು. ಒಬ್ಬ ಮಹಿಳೆ ತನ್ನ ಮನೆಯಲ್ಲಿ ಮಾಡುವ ಕೆಲಸಕ್ಕೆ ಇಂತಿಷ್ಟು ಸಂಬಳ ಎಂದು ಲೆಕ್ಕ ಹಾಕಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾರಿಕಾಂಬಾ ಫೈನಾನ್ಸ್ ಕಾರ್ಯನಿವಾಹ ವ್ಯವಸ್ಥಾಪಕ ಕೆ.ಇ.ಕಾಂತೇಶ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.