ಶಿವಮೊಗ್ಗ: 108 ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸಾಗರದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಸಾಗರದ ಖಾಸಗಿ ಆಸ್ಪತ್ರೆಯಿಂದ ಹೃದಯ ಸಂಬಂಧಿ ಕಾಯಿಲೆಯ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ 108 ಆಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸಾಗರದ ಬಿ.ಹೆಚ್. ರಸ್ತೆಯ ಶಿವಪ್ಪ ನಾಯಕ ವೃತ್ತದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅದೇ ಮಾರ್ಗದಲ್ಲಿ ಬಂದ 108 ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದ ಮೇಲೆ ಗಂಡ , ಹೆಂಡತಿ ಹಾಗೂ ಮಗಳು ಪ್ರಯಾಣಿಸುತ್ತಿದ್ದರು.
ಗಾಯಾಳುಗಳು ಸಾಗರ ತಾಲೂಕಿನ ಅವಿನಹಳ್ಳಿ ಗ್ರಾಮದ ನಿವಾಸಿಗಳು. ಇವರನ್ನು ಸ್ಥಳದಲ್ಲಿದ್ದ ನಗರಸಭೆ ಸದಸ್ಯ ಸೈಯದ್ ಜಾಕಿರ್, ಗಿರೀಶ್ ಕೋವಿ, ಪ್ರವೀಣ್, ದತ್ತು ಸಾಗರ್, ಟಿಎಂಟಿ ಇಮ್ರಾನ್ ತಕ್ಷಣ ಖಾಸಗಿ ವಾಹನದಲ್ಲಿ ಸಾಗರ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತಯೇ 108 ಚಾಲಕ ಮತ್ತು ಸ್ಟಾಫ್ ನರ್ಸ್ ಪರಾರಿಯಾಗಿದ್ದಾರೆ. ಸಾಗರ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
108 ಆಂಬುಲೆನ್ಸ್ ವಿರುದ್ಧ ಸ್ಥಳೀಯರಿಂದ ಆಕ್ರೋಶ : ಇತ್ತೀಚಿನ ದಿನಗಳಲ್ಲಿ 108 ಆಂಬುಲೆನ್ಸ್ ಚಾಲಕರು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದಾರೆ. ವಾಹನದಲ್ಲಿ ರೋಗಿಗಳು ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಅತಿವೇಗದಲ್ಲಿ ಹೋಗುತ್ತಾರೆ. ಈ ಅಪಘಾತ ಕೂಡ ಇದೇ ಕಾರಣಕ್ಕೆ ಆಗಿರೋದು. ಆಂಬುಲೆನ್ಸ್ ಅಪಘಾತವಾದ ಸಂದರ್ಭದಲ್ಲಿ ರೋಗಿಗಳಿಗೆ ರಕ್ಷಣೆ ಮಾಡುವ ಬದಲು ಅಪಘಾತ ಆದ ತಕ್ಷಣ ಆಂಬುಲೆನ್ಸ್ ಚಾಲಕ ಹಾಗೂ EMT ಸ್ಟಾಫ್ ನರ್ಸ್ ಸ್ಥಳದಿಂದ ಪರಾರಿಯಾಗಿದ್ದು ನಾಚಿಕೆಯ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಇಂತಹ ಅಪಘಾತ ಆಗದಂತೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.