ಶಿವಮೊಗ್ಗ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುವ ಮುನ್ನ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣ ಈಗ ಲಾಕ್ಡೌನ್ ನಂತರ ಸಂಪೂರ್ಣ ಅನೈತಿಕ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ.
ಕುಡುಕರ, ಭಿಕ್ಷುಕರ, ಕಳ್ಳಕಾಕರ ಅಷ್ಟೇ ಅಲ್ಲದೆ ವೇಶ್ಯಾವಾಟಿಕೆಯ ತಾಣವಾಗಿ ಬದಲಾಗಿದೆ. ಆದರೆ ಮಹಾನಗರ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ಖಾಸಗಿ ಬಸ್ ನಿಲ್ದಾಣ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಅಷ್ಟೇ ಅಲ್ಲದೆ ಯಾವುದೇ ಸ್ವಚ್ಚತೆ ಇಲ್ಲದೇ ಗಬ್ಬು ನಾರುತ್ತಿದೆ. ಎಲ್ಲೆಂದರಲ್ಲಿ ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು, ಕಸ-ಕಡ್ಡಿಗಳಿಂದಾಗಿ ಗಲೀಜು ಹರಡಿದೆ.
ಹೇಳಿ ಕೇಳಿ ಸಿಎಂ ಕ್ಷೇತ್ರದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಇರುವ ನಗರದ ಜೊತೆಗೆ ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಹೊಂದಿರುವ ನಗರವೇ ಹೀಗಿರುವಾಗ ಬೇರೆ ಏನು ಉದ್ದಾರ ಮಾಡುತ್ತಾರೆ ಎನ್ನುವುದು ಸ್ಥಳಿಯರ ಆಕ್ರೋಶವಾಗಿದೆ.
ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಬೇಬಿ ಕೇರ್ ಸೆಂಟರ್ ಈಗ ಕುಡುಕರ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿದೆ. ಹಾಗೆಯೇ ಸಂಜೆಯಾದರೆ ಕಳ್ಳರ ಕಾಟ ಆರಂಭವಾಗುತ್ತದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಬೇಕು ಹಾಗೂ ಇಡೀ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಿ ಸ್ಯಾನಿಟೈಸ್ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.