ಶಿವಮೊಗ್ಗ: ಮಹಾನಗರಪಾಲಿಕೆ ಆರೋಗ್ಯ ಅಧಿಕಾರಿ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಪಾಲಾಕ್ಷ ಎಂಬ ವ್ಯಕ್ತಿ, ಮಹಾನಗರ ಪಾಲಿಕೆ ಮುಂಭಾಗದಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಯಾನಿಟೈಸರ್ ಸೂಪರ್ವೈಸರ್ ಗುತ್ತಿಗೆ ಕೆಲಸಕ್ಕೆ ಸಂಬಂಧಪಟ್ಟಂತೆ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಮದಕರಿ ಎಂಬುವವರು ಕೆಲಸ ಕೊಡಿಸಲು 1 ಲಕ್ಷ ರೂ ಲಂಚ ಕೇಳುತ್ತಿದ್ದಾರೆ. ಅದಲ್ಲದೇ, ಗುತ್ತಿಗೆದಾರ ರೋಷನ್ ಎಂಬುವವರು 40 ಸಾವಿರ ಲಂಚ ಪಡೆದಿದ್ದು, ಇಲ್ಲಿವರೆಗೆ ಯಾವುದೇ ಕೆಲಸ ನೀಡದೇ, ನೀಡಿರುವ ಹಣವನ್ನೂ ಸಹ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಂಚ ಕೇಳಿದ ಆರೋಗ್ಯಾಧಿಕಾರಿ ಮದಕರಿ ಹಾಗೂ ಲಂಚ ಪಡೆದ ಗುತ್ತಿಗೆದಾರ ರೋಷನ್ ಎಂಬುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಪಾಲಾಕ್ಷ, ಈ ಸಂಬಂಧ ಅನೇಕ ಬಾರಿ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನ್ಯಾಯ ದೊರೆತಿಲ್ಲ. ಆದ್ದರಿಂದ ನ್ಯಾಯಕ್ಕೋಸ್ಕರ ಮಹಾನಗರ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಏಕಾಂಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.