ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಾಯಿಯೋರ್ವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಅಲ್ಮಾಬಾನು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಅಲ್ಮಾ ಬಾನು ಅವರಿಗೆ ಎಂಟು ತಿಂಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಕೂಡಲೇ ಕುಟುಂಬದವರು ಅವರನ್ನು ಇಂದು ಬೆಳಗಿನ ಜಾವ ಶಿವಮೊಗ್ಗದ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದರು.
ಅಲ್ಮಾಬಾನುಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ವೈದ್ಯರು ನಾರ್ಮಲ್ ಡೆಲಿವರಿ ಸಾಧ್ಯವಾಗದ ಕಾರಣ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಅಲ್ಮಾಬಾನು ಎರಡು ಹೆಣ್ಣು ಹಾಗೂ ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ನಾಲ್ಕು ಮಕ್ಕಳೂ ಆರೋಗ್ಯವಾಗಿವೆ. ಆದರೆ ಮಕ್ಕಳ ತೂಕ ಕಮ್ಮಿ ಇರುವುದರಿಂದಾಗಿ ಶಿಶುಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಯಾವುದೇ ಮಹಿಳೆಯ ಗರ್ಭದಲ್ಲಿ ನಾಲ್ಕು ಮಕ್ಕಳ ಬೆಳವಣಿಗೆಯಾದಾಗ ಆ ಮಕ್ಕಳು ಕೇವಲ 28 ವಾರಕ್ಕೇ ಜನನವಾಗುವ ಸಾಧ್ಯತೆಯೇ ಹೆಚ್ಚು. ಬಹುತೇಕ ಈ ರೀತಿಯ ಪ್ರಕರಣಗಳಲ್ಲಿ 28 ವಾರಕ್ಕಿಂತಲೂ ಮೊದಲು ಹೆರಿಗೆಯಾಗಿ ಮಕ್ಕಳು ಸಾವಿಗೀಡಾಗುತ್ತವೆ. ಆದರೆ ಅಲ್ಮಾಬಾನು ಪ್ರಕರಣದಲ್ಲಿ 32 ವಾರಕ್ಕೆ ಮಕ್ಕಳ ಜನನವಾಗಿರುವುದರಿಂದ ಮಕ್ಕಳು ಆರೋಗ್ಯವಾಗಿವೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಬಿ ವೈ ವಿಜಯೇಂದ್ರಗೆ ಕೈಕೊಡ್ತಾ ಬಿಜೆಪಿ ಹೈಕಮಾಂಡ್!?.. ಸಚಿವ ಹಾಲಪ್ಪ ಆಚಾರ್ ಹೀಗಂದರು..
ಅಲ್ಮಾಬಾನುಗೆ ಸ್ಕಾನಿಂಗ್ ವೇಳೆಯೇ ಗರ್ಭದಲ್ಲಿ ನಾಲ್ಕು ಮಕ್ಕಳಿರುವುದು ತಿಳಿದಿತ್ತು. ಹೀಗಾಗಿ ಆಕೆಯನ್ನೂ ಕಾಳಜಿಯಿಂದ ನೋಡಿಕೊಳ್ಳುವಂತೆ ಸೂಚಿಸಲಾಗಿತ್ತು. ಜೊತೆಗೆ ಆಕೆಯ ಆರೋಗ್ಯದಲ್ಲಿ ಯಾವುದೇ ಏರುಪೇರು ಕಾಣಿಸಿದರೂ ಆಸ್ಪತ್ರೆಗೆ ಕರೆತರುವಂತೆ ಸೂಚಿಸಲಾಗಿತ್ತು. ಕೊನೆಗೂ ನಾಲ್ಕು ಮಕ್ಕಳ ಹೆರಿಗೆ ಮಾಡಿಸುವಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ. ಭದ್ರಾವತಿ ತಾಲೂಕು ತಡಸ ಗ್ರಾಮದ ಆರಿಫ್ ಹಾಗೂ ಅಲ್ಮಾ ಬಾನು ದಂಪತಿಗೆ ನಾಲ್ವರು ಮಕ್ಕಳ ಜನನವಾಗಿರುವುದು ಇಡೀ ಮಲೆನಾಡನ್ನೇ ಚಕಿತಗೊಳಿಸಿದೆ.