ಶಿವಮೊಗ್ಗ: ಹೋರಿ ಸ್ಪರ್ಧೆಗೆ ಜಿಲ್ಲೆಯಲ್ಲಿ ಮೂರನೇ ಬಲಿ ಆಗಿದೆ. ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಇಂದು ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ಅವಘಡ ನಡೆದಿದೆ. ಸ್ಪರ್ಧೆ ನೋಡಲು ಬಂದಿದ್ದ ವೇಳೆ ಹೋರಿ ಗುದ್ದಿದ್ದರಿಂದ ಕಲ್ಮನೆ ಗ್ರಾಮದ ವಸಂತ (30) ಸಾವನ್ನಪ್ಪಿದ್ದಾರೆ.
ಸ್ಪರ್ಧೆಯಲ್ಲಿ ನೂರಾರು ಹೋರಿಗಳು ಭಾಗಿಯಾಗಿದ್ದವು. ಅಲ್ಲದೆ ಸ್ಪರ್ಧೆ ನೋಡಲು ಸಾವಿರಾರು ಜನರು ಬಂದಿದ್ದರು. ಸ್ಪರ್ಧೆ ನೋಡಲು ವಸಂತ ಕೂಡ ಆಗಮಿಸಿದ್ದರು. ಈ ವೇಳೆ ವಸಂತನ ಕುತ್ತಿಗೆಗೆ ಹೋರಿ ಗುದ್ದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವಸಂತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈವರೆಗೆ ಮೂವರು ಬಲಿ: ದೀಪಾವಳಿಯ ನಂತರ ಜಿಲ್ಲೆಯ ಅರೆ ಮಲೆನಾಡು ತಾಲೂಕುಗಳಾದ ಶಿಕಾರಿಪುರ, ಸೊರಬ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಶನಿವಾರ ಶಿಕಾರಿಪುರ ತಾಲೂಕಿನ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮಾಲೀಕನ ಕೈಯಿಂದ ತಪ್ಪಿಸಿಕೊಂಡು ಪ್ರಶಾಂತ(36) ಎಂಬವರ ಎದೆಯ ಮೇಲೆ ಹೋರಿ ಕಾಲಿಟ್ಟದ್ದರಿಂದ ಅವರು ಮೃತಪಟ್ಟಿದ್ದರು. ಹಾಗೆಯೇ ಸೊರಬ ತಾಲೂಕು ಜಡೆ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಚಗಟೂರು ಗ್ರಾಮ ಆದಿ (20) ಎಂಬ ಯುವಕ ಸಾವನ್ನಪ್ಪಿದ್ದಾನೆ. ಓಡುತ್ತಿದ್ದ ಹೋರಿ ತನ್ನ ಕೊಂಬಿನಿಂದ ತಿವಿದಿದ್ದರಿಂದ ಈ ಘಟನೆ ನಡೆದಿದೆ.
(ಓದಿ: ವಿಜಯನಗರದಲ್ಲಿ ಟ್ರ್ಯಾಕ್ಟರ್- ಕಾರು ಡಿಕ್ಕಿ : ಓರ್ವ ಸಾವು, ನಾಲ್ವರಿಗೆ ಗಾಯ)