ಶಿವಮೊಗ್ಗ: ನನ್ನ ವಿರುದ್ಧ ದೆಹಲಿಯ ಆಪ್ನ ರಾಜ್ಯಸಭಾ ಸದಸ್ಯರೊಬ್ಬರು ದೂರು ನೀಡಿದ್ದಾರಷ್ಟೇ. ಆದರೆ ಇನ್ನೂ ಎಫ್ಐಆರ್ ದಾಖಲಾಗಿಲ್ಲ. ನೋಡೋಣ ಪೊಲೀಸರು ಮುಂದೆ ಏನ್ ಮಾಡ್ತಾರೆ. ನಾನು ಎಂದೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವವರು ರಾಷ್ಟ್ರದ್ರೋಹಿಗಳು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ರು. ಇದನ್ನೇ ಅಧಿವೇಶನದಲ್ಲಿ ಇಟ್ಟುಕೊಂಡು ಹೋರಾಟ ನಡೆಸಿದ್ರು. ನನ್ನ ವಿಚಾರ ಮುಂದಿಟ್ಟುಕೊಂಡು ಪ್ರಚಾರ ಪಡೆದುಕೊಂಡರು. ನಮಗೆ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ. ಆದರೆ ಮುಂದೊಂದು ದಿನ ಅದು ರಾಷ್ಟ್ರಧ್ವಜವಾಗಬಹುದು, ಕೆಂಪು ಕೋಟೆಯ ಮೇಲೆ ಹಾರಾಡಬಹುದು ಎಂದು ಹೇಳಿದ್ದೆ ಅಷ್ಟೇ ಎಂದರು.
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಸಿಎಂ ರೇಸ್ನಲ್ಲಿದ್ದಾರೆ: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರು ಸಹ ಸಿಎಂ ರೇಸ್ನಲ್ಲಿದ್ದಾರೆ. ಇಬ್ಬರು ನಾನ್ ಸಿಎಂ ಆಗಬೇಕು, ನಾನ್ ಸಿಎಂ ಆಗಬೇಕು ಎಂದು ಓಡಾಡುತ್ತಿದ್ದಾರೆ. ಇಬ್ಬರ ಬೆಂಬಲಿಗರು ಇವರು ಹೋದಲೆಲ್ಲಾ ಘೋಷಣೆ ಕೂಗುತ್ತಿದ್ದಾರೆ. ಸಿದ್ದರಾಮಯ್ಯ ಎಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಲಿ. ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಜನ ಸೋಲಿಸಿದ್ರು, ಈಗ ಬದಾಮಿಯಲ್ಲಿದ್ದಾರೆ. ಮುಂದೆ ಎಲ್ಲಿ ನಿಲ್ತಾರೆ ಅಂತಾ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ. ಸಿದ್ದರಾಮಯ್ಯ ಆರ್ಎಸ್ಎಸ್ ಬಗ್ಗೆ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಇನ್ನೂ ಎಲ್ಕೆಜಿ ಸ್ಟೂಡೆಂಟ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ: ಠಾಣೆ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ಪ್ರೇಯಸಿ
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮುಸ್ಲಿಮರಿಗೆ ಅಪಮಾನ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಅಪಮಾನ ಮಾಡ್ತಾ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡ್ತಾ ಇದೆ. ಕಾಂಗ್ರೆಸ್ನವರಿಗೆ ಎರಡು ಸ್ಥಾನ ಗೆಲ್ಲುವ ಅವಕಾಶವೇ ಇಲ್ಲ. ಕೇವಲ ಒಂದೇ ಸೀಟು ಗೆಲ್ಲಲು ಮಾತ್ರ ಅವಕಾಶವಿದೆ. ಅವರು ಜೈರಾಮ್ ರಮೇಶ್ ಆಯ್ಕೆ ಮಾಡಿಕೊಂಡಿದ್ದು, ಎರಡನೇ ಅಭ್ಯರ್ಥಿಯಾಗಿ ಮುಸ್ಲಿಮರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಮುಸ್ಲಿಮರಿಗೆ ಅಪಮಾನವಾಗಿದೆ. ಹೇಗಿದ್ದರೂ ಸೋಲುತ್ತೇವೆ ಎಂದು ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.