ಶಿವಮೊಗ್ಗ: ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ. ಇಂದು ಜಿಲ್ಲೆಯಲ್ಲಿ 58 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 702 ಕ್ಕೆ ತಲುಪಿದೆ.
ಇಂದು ಆಸ್ಪತ್ರೆಯಿಂದ 36 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 280 ಜನ ರಿಕವರಿ ಆಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು 14 ಜನ ಸೋಂಕಿತರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ 219 ಕಂಟೇನ್ಮೆಂಟ್ ಝೋನ್ ರಚನೆ ಮಾಡಲಾಗಿದೆ. ಶಿವಮೊಗ್ಗ-37, ಭದ್ರಾವತಿ-03, ಸಾಗರ-04, ಶಿಕಾರಿಪುರ-03, ಹೊಸನಗರ-02, ತೀರ್ಥಹಳ್ಳಿ-01, ಸೊರಬ-01, ಸೋಂಕಿತರಿದ್ದಾರೆ. ಇನ್ನು ಬೆಂಗಳೂರಿನಿಂದ ಬಂದ ಇಬ್ಬರಲ್ಲಿ, ದಾವಣಗೆರೆಯಿಂದ ಬಂದ ಮೂವರಲ್ಲಿ ಹಾಗೂ ಚಿಕ್ಕಮಗಳೂರಿನಿಂದ ಬಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ 176 ಜನ, ಕೋವಿಡ್ ಕೇರ್ ಸೆಂಟರ್ ಗಾಜನೂರು ಇಲ್ಲಿ 219 ಜನ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 14 ಹೀಗೆ ಒಟ್ಟು 409 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಸ್ವ್ಯಾಬ್ ಸಂಗ್ರಹ ನಡೆಸಲಾಗುತ್ತಿದೆ. ನಿನ್ನೆ 381 ಜನರ ಸ್ವ್ಯಾಬ್ ತೆಗೆಯಲಾಗಿದೆ. ಇದುವರೆಗೂ 22,601 ಜನರ ಸ್ವ್ಯಾಬ್ ತೆಗೆಯಲಾಗಿದೆ. ಇದರಲ್ಲಿ 21,116 ಜನರ ಫಲಿತಾಂಶ ಬಂದಿದೆ. ಇನ್ನೂ 1,413 ಜನರ ವರದಿ ಬರಬೇಕಿದೆ. ಇದರಲ್ಲಿ ಇನ್ನಷ್ಟು ಪಾಸಿಟಿವ್ ಪ್ರಕರಣಗಳು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದಿನಿಂದ ಆಫ್ ಲಾಕ್ ಡೌನ್ ಪ್ರಾರಂಭಿಸಲಾಗಿದೆ.