ಶಿವಮೊಗ್ಗ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಪೋಲಿಸ್ ಠಾಣೆಯಲ್ಲಿ 2 ಹಾಗೂ ತುಂಗಾನಗರ ಪೋಲಿಸ್ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 3 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ 424 ದ್ವಿ ಚಕ್ರ ವಾಹನಗಳು ಮತ್ತು 3 ಆಟೋ ಹಾಗೂ 14 ಕಾರುಗಳು ಸೇರಿ ಒಟ್ಟು 441 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 1,51,300 ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಗುಡುಗು,ಸಿಡಿಲು ಸಹಿತ ಭಾರಿ ಮಳೆ:
ಶಿವಮೊಗ್ಗ ಜಿಲ್ಲಾದ್ಯಂತ ನಿನ್ನೆ ಸಂಜೆಯಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಪ್ರತಿದಿನ ಸಂಜೆ ಮಳೆಯಾಗುತ್ತಿದ್ದು ನಿನ್ನೆ ಗುಡುಗು ಸಹಿತ ಧಾರಕಾರ ಮಳೆಯಾಗಿದೆ. ಸಂಜೆ ಸುರಿದ ಭಾರಿ ಮಳೆಯಿಂದಾಗಿ ನಗರದ ಬಾಪೂಜಿ ನಗರ, ಹೊಸಮನೆ, ಗೋಪಾಳಗೌಡ ಬಡಾವಣೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಆತಂಕದಲ್ಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಭತ್ತ ಕೊಯ್ಲಿಗೆ ಬಂದಿದ್ದು, ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ ಹಾಳಾಗುವ ಸಾಧ್ಯತೆ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ.