ಶಿವಮೊಗ್ಗ : ಈ ಬಾರಿ ಸುರಿದ ಮುಂಗಾರು ಮಳೆಗೆ ಜಿಲ್ಲೆಯಲ್ಲಿ ಸುಮಾರು 418 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ, ಜನ-ಜಾನುವಾರುಗಳು ನಷ್ಟ ಆಗಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಮಾಹಿತಿ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4609 ಹೆಕ್ಟೇರ್ ಸಣ್ಣ ರೈತರ ಕೃಷಿ ಭೂಮಿ,1132 ಹೆಕ್ಟೇರ್ ತೋಟ, 240 ಇತರೆ ರೈತರ ಕೃಷಿ ಭೂಮಿ ಹಾಳಾಗಿದೆ. ಹಾಗೂ ಒಟ್ಟು ನಾಲ್ಕು ಜನ ಸಾವನ್ನಪ್ಪಿದ್ದಾರೆ. 27 ಜಾನುವಾರುಗಳು ಬಲಿಯಾಗಿವೆ ಎಂದರು.
ಅಲ್ಲದೆ, 126 ಮನೆಗಳಿಗೆ ಸಂಪೂರ್ಣ ಹಾನಿ, 478 ಮನೆಗಳಿಗೆ ಹೆಚ್ಚಿನ ಹಾನಿ, 540 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 56 ಕಿ.ಮೀ ರಾಜ್ಯ ಹೆದ್ದಾರಿ,138 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ,1243 ಕಿ.ಮೀ ನಗರ ರಸ್ತೆಗಳು ಮಳೆಗೆ ಹಾನಿ ಆಗಿವೆ. ಉಳಿದಂತೆ 196 ಸೇತುವೆ, 2033 ವಿದ್ಯುತ್ ಕಂಬಗಳು, 309 ಅಂಗನವಾಡಿ ಕಟ್ಟಡಗಳು, 1000 ಪ್ರಾಥಮಿಕ ಶಾಲೆಗಳು ಹಾಗೂ 326 ಕೆರೆಗಳಿಗೆ ಹಾನಿಯಾಗಿದೆ ಎಂದು ವಿವರಿಸಿದರು.
ಪ್ರಾಥಮಿಕ ಹಂತದ ನೆರೆ ಹಾನಿ ಸರ್ವೇಯಿಂದ ಇಷ್ಟು ಪ್ರಮಾಣದ ಹಾನಿ ವಿವರ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಹಾನಿಯ ನಷ್ಟದ ಪ್ರಮಾಣ ಹೆಚ್ಚಾಗಬಹುದಾಗಿದೆ ಎಂದು ಸಚಿವರು ತಿಳಿಸಿದರು.