ಶಿವಮೊಗ್ಗ: ಬಾಲಕರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ ವ್ಯಕ್ತಿಗೆ ಅಡಿಶನಲ್ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ ಹಾಗೂ 1.44 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಸೊರಬ ತಾಲೂಕಿನ ತಿಮ್ಮಪ್ಪ (42) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ಈತ ಅಪ್ರಾಪ್ತ ಬಾಲಕರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪದ ಮೇರೆಗೆ 12-01-2020 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಂದಿನ ಪಿಐ ಗುರುರಾಜ್ ಕೇಸ್ ದಾಖಲಿಸಿಕೊಂಡು ಕೋರ್ಟ್ಗೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಲತಾ ಅವರು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.44 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲರಾದ್ರೆ ಹೆಚ್ಚುವರಿಯಾಗಿ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಹರಿಪ್ರಸಾದ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ಫೋಟೋ ತೋರಿಸುತ್ತಿದ್ದ ಶಿಕ್ಷಕರು: ಶಾಲೆಯಲ್ಲೇ ಹಿಡಿದು ಥಳಿಸಿದ ಪೋಷಕರು
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: 10 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಾಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಭದ್ರಾವತಿ ತಾಲೂಕಿನ ಆರ್ಮುಗಂ (38) ಎಂಬಾತ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಕುರಿತು ನೊಂದ ಬಾಲಕಿಯ ತಾಯಿ ದೂರು ನೀಡಿದ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಭದ್ರಾವತಿ ಗ್ರಾಮಾಂತರ ಪಿಐ ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ಕಂಡವರ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಜೈಲು ಸೇರಿದ ಆರೋಪಿ
ಪ್ರಕರಣ ಅಲಿಸಿದ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ಅವರು ಆರ್ಮುಗಂಗೆ ಜೀವಾವಧಿ ಶಿಕ್ಷೆ ನೀಡುವುದರ ಜೊತೆಗೆ 20 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ದಂಡದ ಹಣ ಕಟ್ಟಲು ವಿಫಲವಾದ್ರೆ ಹೆಚ್ಚುವರಿ 6 ತಿಂಗಳು ಸಾದಾ ಸಜೆಯನ್ನು ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಹರಿಪ್ರಸಾದ್ ವಾದ ಮಂಡಿಸಿದ್ದರು.