ಶಿವಮೊಗ್ಗ : ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ನೀಡಿದ ಬೈಕ್ ಮಾಲೀಕನಿಗೆ ತೀರ್ಥಹಳ್ಳಿ ನ್ಯಾಯಾಲಯ 20 ಸಾವಿರ ರೂ ದಂಡ ವಿಧಿಸಿದೆ. ತೀರ್ಥಹಳ್ಳಿಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ದಂಡ ಹಾಕಿ ಆದೇಶಿಸಿದ್ದಾರೆ.
ನಿನ್ನೆ (19-06-2023) ಕುಶಾವತಿ ಸೇತುವೆ ಬಳಿ ತೀರ್ಥಹಳ್ಳಿ ಪೊಲೀಸರು ತಪಾಸಣೆ ನಡೆಸುವಾಗ 17 ವರ್ಷದ ಬಾಲಕನೋರ್ವ ಹೆಲ್ಮಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದನು. ಬಾಲಕನನ್ನು ತಡೆದು ತಪಾಸಣೆ ನಡೆಸಿದ್ದಾರೆ. KA -14 EY- 5452 ನೋಂದಣಿ ಸಂಖ್ಯೆಯ ಬೈಕ್ ಅನ್ನು ಪರವಾನಿಗೆ ಇಲ್ಲದೆ ಚಲಾಯಿಸುತ್ತಿರುವುದು ತಿಳಿದುಬಂದಿತ್ತು.
ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಾಲಕನಿಗೆ ಚಲಾಯಿಸಲು ಬೈಕ್ ನೀಡಿದ್ದ ಬೈಕ್ ಮಾಲೀಕ ತೀರ್ಥಹಳ್ಳಿ ತಾಲೂಕಿನ ಕಳ್ಳಿಗದ್ದೆ ಗ್ರಾಮದ ನಿವಾಸಿ ಪ್ರಮೋದ್ ಎಸ್ (38) ಎಂಬವರ ವಿರುದ್ಧ ಲಘು ಪ್ರಕರಣ ದಾಖಲಿಸಿದ್ದರು. ತೀರ್ಥಹಳ್ಳಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ವರ್ಷ ಸಹ ಇದೇ ರೀತಿ ತನ್ನ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ನ್ಯಾಯಾಲಯ ದಂಡ ವಿಧಿಸಿತ್ತು.
ವಿಜಯಪುರದಲ್ಲಿ ಲೋಕಾಯುಕ್ತ ದಾಳಿ : ವಿಜಯಪುರ ಉಪವಿಭಾಗಾಧಿಕಾರಿ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ವ್ಯಕ್ತಿಯೊಬ್ಬರಿಂದ ಎನ್‌ಎ ಭೂಮಿಗೆ ಎನ್‌ಓಸಿ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಕಚೇರಿಯ ಪ್ರಥಮ ದರ್ಜೆ ನೌಕರ ಹಾಗೂ ಜವಾನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳವಾರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಡಿಎಸ್‌ಪಿ ಅರುಣ ನಾಯಕ ಅವರ ತಂಡ ಉಪವಿಭಾಗಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಎಫ್‌ಡಿಎ ರಮೇಶ ಹೊನ್ನಹಳ್ಳಿ ಹಾಗೂ ಕಚೇರಿಯ ಜವಾನ ಪ್ರಮೋದ ಕನಸೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಾಳಿಕೋಟೆಯ ಪೀರ್ ಮಹಮ್ಮದ್ ಅಬ್ದುಲ್ ಅಜ್ಜಾ ಎಂಬವರು ತಮ್ಮ ಜಮೀನಿಗೆ ಎನ್‌ಓಸಿ ಪಡೆಯಲು ಕಚೇರಿಗೆ ಹೋಗಿದ್ದರು. ಎಫ್‌ಡಿಎ ರಮೇಶ ಹೊನ್ನಹಳ್ಳಿ ಹಾಗೂ ಜವಾನ ಪ್ರಮೋದ ಕನಸೆ 8 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪೀರ ಮಹಮ್ಮದ್ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಇಂದು ಪೀರ್ ಅಹಮ್ಮದ್ ಅವರು 8 ಸಾವಿರ ನಗದು ತೆಗೆದುಕೊಂಡು ಎಫ್‌ಡಿಎಗೆ ಕೊಡುವಾಗ ಲೋಕಾಯುಕ್ತರು ದಾಳಿ ನಡೆಸಿ ಬಂಧಿಸಿದ್ದಾರೆ.
ಇದನ್ನೂ ಓದಿ : Lokayuktha Raid: ಕೆಎಸ್ಡಿಎಲ್ ಪ್ರಧಾನ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ದಾಖಲೆಗಳ ಪರಿಶೀಲನೆ