ಶಿವಮೊಗ್ಗ: ಎರಡು ಕೋಮುಗಳ ಗಲಾಟೆಯನ್ನು ನಿಯಂತ್ರಿಸಲು ವಿಧಿಸಲಾಗಿದ್ದ 144 ಸೆಕ್ಷನ್ ಮುಂದುವರಿದಿದ್ದು, ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಗುರುವಾರ ಬೆಳಗ್ಗೆ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದ ಬಳಿಕ, ಎರಡು ಕೋಮುಗಳ ಗಲಾಟೆ ಉಂಟಾಗಿತ್ತು.
ನಗರದ ಕೋಟೆ ಪೊಲೀಸ್ ಠಾಣೆ, ಜಯನಗರ ಹಾಗೂ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ಮುಂದುವರಿಸಲಾಗಿದ್ದು, ನಿಷೇಧಾಜ್ಞೆ ಪರಿಣಾಮವಾಗಿ ನಗರದಲ್ಲಿ ವಾಹನ ಸಂಚಾರ ಬಹುತೇಕ ವಿರಳವಾಗಿದ್ದು, ತುರ್ತು ಅಗತ್ಯಗಳಿಗೆ ಮಾತ್ರ ಜನರು ಸಂಚರಿಸುತ್ತಿದ್ದಾರೆ.
ಓದಿ: ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ: ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿ
ಹಳೆ ಶಿವಮೊಗ್ಗ ಭಾಗದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪೊಲೀಸ್ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ನಾಳೆ ಬೆಳಗ್ಗೆ 10 ಗಂಟೆ ವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು, ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಗರದಲ್ಲಿ ನಿಯೋಜಿಸಲಾಗಿದ್ದು, ಪೂರ್ವ ವಲಯ ಐಜಿಪಿ ನಗರದಲ್ಲಿ ಮೊಕ್ಕಾಂ ಹೂಡಿದ್ದು, ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.