ಶಿವಮೊಗ್ಗ: ರಾಜ್ಯದಲ್ಲಿ ಹೈಬ್ರೀಡ್ ಪಾರ್ಕ್ ಮೂಲಕ 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹೈಬ್ರೀಡ್ ಪಾರ್ಕ್ ನಿರ್ಮಾಣ ಮಾಡಬೇಕು ಎನ್ನುವ ಯೋಜನೆ ಕೈಗೊಂಡಿದ್ದೇವೆ. ಸೊಲಾರ್ ಮತ್ತು ವಿಂಡ್ ಒಳಗೊಂಡ ಹೈಬ್ರೀಡ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ ಎಂದರು.
ಮುಂಗಾರು ನಿರೀಕ್ಷೆಯಂತೆ ಪ್ರಾರಂಭವಾಗಿಲ್ಲ, ಆದರೆ ಆಗಸ್ಟ್ ತಿಂಗಳ ಹೊತ್ತಿಗೆ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿ ಆಗಿ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಮುಂಗಾರು ಮತ್ತು ಮುಂಗಾರು ನಂತರ ಆಗಬಹುದಾದ ಪರಿಣಾಮಗಳ ಬಗ್ಗೆ ಇಲಾಖೆ ಕ್ರಮ ಕೈಗೊಂಡಿದೆ.
ಇನ್ನೂ ದಾವಣಗೆರೆ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಉಜ್ವಲ ಯೋಜನೆಯ ಭ್ರಷ್ಟಾಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಠ್ಯ ಪುಸ್ತಕದ ಕುರಿತು ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಳ್ಳಲು ಪ್ರಾರಂಭ ಮಾಡಲಾಗಿದೆ. ಸಲಹೆ, ಸೂಚನೆ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪಠ್ಯ ಪುಸ್ತಕ ವಿಳಂಬದ ಕುರಿತು ಶಿಕ್ಷಣ ಸಚಿವರು ಗಮನಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ