ರಾಮನಗರ: ಜಿಲ್ಲೆಯ ಬಿಡದಿಯ ಟೊಯೋಟಾ ಕಂಪನಿ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಪಾದಯಾತ್ರೆಗೆ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಚಾಲನೆ ನೀಡಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಹೊರಟ ಪಾದಯಾತ್ರೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು. ಜೊತೆಗೆ ಮೈಸೂರು, ಮಂಡ್ಯ ಜಿಲ್ಲೆಯಿಂದಲೂ ನೂರಾರು ಕಾರ್ಮಿಕರು ಆಗಮಿಸಿದ್ದಾರೆ.
ಸತತ 65ಕ್ಕೂ ಹೆಚ್ಚು ದಿನಗಳಿಂದ ಟೊಯೋಟಾ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ನಡುವೆ ಮುಸುಕಿನ ಗದ್ದಾಟ ನಡೆಯುತ್ತಿದೆ. ನಿರಂತರ ಹೋರಾಟ ನಡೆಸಿದ್ರು ಕೂಡ ಯಾವುದೇ ಪ್ರಯೋಜವಾಗಿಲ್ಲ. ಅಷ್ಟೇ ಅಲ್ಲದೆ ಸರ್ಕಾರ, ಜನಪ್ರತಿನಿಧಿಗಳು ಸೇರಿದಂತೆ ಕಾರ್ಮಿಕರು ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದು, ವಿಫಲವಾದ ಹಿನ್ನೆಲೆ ಆಕ್ರೋಶಗೊಂಡ ಕಾರ್ಮಿಕರು ಪಾದಯಾತ್ರೆ ನಡೆಸುತ್ತಿದ್ದಾರೆ.
ಹೆದ್ದಾರಿಯಿಂದ ಕಂಪನಿಯವರೆಗೆ ಸುಮಾರು 5 ಕಿ. ಮೀ ವರೆಗೆ ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಈ ವೇಳೆ ಅಮಾನತುಗೊಂಡಿರುವ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಾರ್ಮಿಕರ ಪಾದಯಾತ್ರೆಗೆ ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕರಾದ ನರೇಂದ್ರಸ್ವಾಮಿ, ಚಲುವರಾಯಸ್ವಾಮಿ ಕೂಡ ಸಾಥ್ ನೀಡಿದರು.